ನನ್ನ ಮಗ ನನ್ನನ್ನು ಬಿಟ್ಟು ಇನ್ನೊಂದು ರೈಲಿನಲ್ಲಿ ಹೋಗಿದ್ದಾನೆ ಎಂದು ಎಷ್ಟು ಹೇಳಿದರೂ ನಾನು ನಂಬಲಿಲ್ಲ:ಜಹನಾರ ಬೇಗಂ

Update: 2017-03-13 09:13 GMT

ಪ್ರತಿಯೊಬ್ಬರಂತೆ ನೀವೂ ನನ್ನನ್ನು ಭಿಕ್ಷುಕಿ ಎಂದು ಭಾವಿಸುತ್ತಿದ್ದೀರಿ. ಆದರೆ ನನ್ನ ಜೀವನದಲ್ಲಿ ಒಂದು ದಿನವೂ ನಾನು ಬೇಡಿದವಳಲ್ಲ. ವಿಚಿತ್ರವೆಂದರೆ ಪ್ರತಿ ದಿನವೂ ಬೆಳಿಗ್ಗೆ ನಾನು ನಿದ್ರೆಯಿಂದ ಎಚ್ಚೆತ್ತಾಗ ನನ್ನ ತಲೆಯ ಬಳಿ ಹಣವಿರುತ್ತದೆ. ಅಪರಿಚಿತ ವ್ಯಕ್ತಿಗಳ ಈ ದಯಾಪರತೆಯ ಬಗ್ಗೆ ಅಚ್ಚರಿ ಪಡುವುದನ್ನು ನಾನೀಗ ನಿಲ್ಲಿಸಿದ್ದೇನೆ. ನನ್ನ ಬಳಿಯೇ ಇರಲು ಇಷ್ಟಪಡುವ ಎಷ್ಟೋ ಬೀದಿಮಕ್ಕಳಿದ್ದಾರೆ. ಏಕೆಂದರೆ ನಾನು ಹಣವನ್ನು ಇತರ ಭಿಕ್ಷುಕರಿಗೆ ನೀಡುವುದನ್ನು ಅವರು ನೋಡಿದ್ದಾರೆ.

ನಾನು ಈ ಮಕ್ಕಳಿಗೆಂದೂ ಹಣವನ್ನು ನೀಡಿಲ್ಲ, ಆದರೆ ಸದಾ ಅವರಿಗೆ ಐಸ್‌ಕ್ರೀಂ ತೆಗೆಸಿಕೊಟ್ಟಿದ್ದೇನೆ. ನನ್ನ ಮೊಮ್ಮಗ ಐಸ್‌ಕ್ರೀಂ ಅನ್ನು ತುಂಬ ಇಷ್ಟಪಡುತ್ತಾನೆ.

 ಅಂದು ನನ್ನ ಕಣ್ಣಿನ ಚಿಕಿತ್ಸೆಗಾಗಿ ನಾನು ಮಗನೊಂದಿಗೆ ನಗರಕ್ಕೆ ಬರುತ್ತಿರುವಾಗ ನನ್ನ ಮುದ್ದು ಮೊಮ್ಮಗ ನನ್ನನ್ನು ತಬ್ಬಿಕೊಂಡಿದ್ದ, ನನ್ನನ್ನು ಹೋಗಲು ಬಿಡುತ್ತಲೇ ಇರಲಿಲ್ಲ. ‘ನೀನು ಮತ್ತೆ ವಾಪಸ್ ಬರಲು ಸಾಧ್ಯವಾಗುವುದಿಲ್ಲ ’ಎಂದಾತ ನನಗೆ ಹೇಳುತ್ತಿದ್ದ. ಆತ ಯಾವಾಗಲೂ ವಿಚಿತ್ರವಾಗಿ ಮಾತನಾಡುತ್ತಿದ್ದರಿಂದ ನಾನು ಈಗಲೂ ಅವನ ಮಾತುಗಳಿಗೆ ನಕ್ಕುಬಿಟ್ಟಿದ್ದೆ. ಕೊನೆಯಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವಂತೆ ನಾನಾತನಿಗೆ ಹೇಳಿದ್ದೆ.

ನಾನು ರೈಲ್ವೆ ನಿಲ್ದಾಣದ ಬೆಂಚಿನ ಮೇಲೆ ಎರಡು ದಿನಗಳ ಕಾಲ ಕುಳಿತುಕೊಂಡಿದ್ದೆ. ಏನೇ ಆಗಲಿ,ಇಲ್ಲಿಂದ ಕದಲಬೇಡ ಎಂದು ನನ್ನ ಮಗ ಹೇಳಿ ಹೋಗಿದ್ದ. ಹೀಗಾಗಿ ಆತ ರಿಕ್ಷಾದಲ್ಲಿ ವಾಪಸ್ ಬರುವುದನ್ನೇ ನಾನು ಕಾಯುತ್ತಿದ್ದೆ.

ನಿಲ್ದಾಣದಲ್ಲಿ ನೀರು ಮಾರಾಟ ಮಾಡುತ್ತಿದ್ದ ಬೀದಿ ಹುಡುಗ ನನ್ನ ಮಗ ಇನ್ನೊಂದು ರೈಲಿನಲ್ಲಿ ಹೊರಟುಹೋಗಿದ್ದಾನೆ ಎಂದು ಪದೇಪದೇ ನನಗೆ ತಿಳಿಸಿದ್ದ. ತಾನು ಅನಾರೋಗ್ಯ ಪೀಡಿತ ವೃದ್ಧೆಯಿಂದ ಕಳಚಿಕೊಂಡಿದ್ದೇನೆ ಎಂದು ನನ್ನ ಮಗ ಯಾರೊಂದಿಗೋ ಹೇಳಿದ್ದನ್ನು ಈ ಹುಡುಗ ಕೇಳಿಸಿಕೊಂಡಿದ್ದ. ನಾನಾತನ ಮಾತನ್ನು ನಂಬಲಿಲ್ಲ. ನನ್ನ ಮಗನ ಮಾತಿನ ಮುಂದೆ ಬೀದಿ ಹುಡುಗನೊಬ್ಬನ ಮಾತನ್ನು ನಾನು ನಂಬುವುದಿಲ್ಲ.

ಕಣ್ಣಿನ ದೋಷದಿಂದ ನನಗೆ ಸರಿಯಾಗಿ ಕಾಣುವುದಿಲ್ಲ, ಆದರೆ ಮಗನ ಬರುವಿಕೆಗಾಗಿ ಆದಷ್ಟು ಕಣ್ಣಗಲಿಸಿಕೊಂಡು ಕಾಯುತ್ತಿದ್ದೆ, ನನ್ನ ಕಿವಿಗಳು ಆತನ ಧ್ವನಿಯನ್ನು ಕೇಳಲು ಜಾಗ್ರತವಾಗಿದ್ದವು. ನಾನು ಆತನ ಮನೆಗೆ ವಾಪಸ್ಸಾಗಲು ಮತ್ತು ನನ್ನ ಮೊಮ್ಮಗನನ್ನು ತಬ್ಬಿಕೊಳ್ಳಲು ತುಂಬ ತವಕದಲ್ಲಿದ್ದೆ. ಬೀದಿಹುಡುಗ ಸದಾ ಕಾಲವೂ ನನ್ನ ಜೊತೆಯಲ್ಲಿಯೇ ಇದ್ದ. ತನ್ನ ತಂದೆಯೂ ತನ್ನನ್ನು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂದ ಆತ, ನನ್ನ ಮನಸ್ಸಿನ ಭಾವನೆಗಳು ತನಗೆ ಅರ್ಥವಾಗುತ್ತಿದೆ ಎಂದು ಹೇಳಿದ್ದ. ಇಲ್ಲ,ಯಾರೊಬ್ಬರೂ ನನ್ನ ಭಾವನೆಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ....ನನ್ನ ಜೀವನದಲ್ಲಿ ನಾನು ಹಲವು ಬಾರಿ ನನ್ನದೆನ್ನುವುದನ್ನು ಕಳೆದುಕೊಂಡಿದ್ದೇನೆ.

ಈ ಅಪರಿಚಿತ ನಗರಕ್ಕೆ ಬಂದಾಗಿನಿಂದಲೂ ನಾನೂ ಯಾರಿಂದಲೂ ನೆರವು ಬೇಡಿಲ್ಲ. ಆದರೆ ನಿಮ್ಮನ್ನು ಕೇಳುತ್ತಿದ್ದೇನೆ. ನೀವು ನನ್ನ ಹೃದಯವನ್ನು ಬದಲಾಯಿಸಬಲ್ಲಿರಾ? ರಕ್ತದ ಯಾವುದೇ ಕುರುಹು ಇಲ್ಲದೆ ಅದು ಸದಾ ರಕ್ತವನ್ನು ಸುರಿಸುತ್ತಿರುತ್ತದೆ. ನನ್ನ ಎದೆಯಲ್ಲಿ ಭಯಂಕರ ನೋವಾಗುತ್ತಿದೆ. ಯಾರೋ ಈ ಜಗತ್ತಿನ ಭಾರವನ್ನೆಲ್ಲ ನನ್ನ ಮೇಲೆ ಹೇರಿದಂತಹ ನೋವನ್ನು ನಾನು ಅನುಭವಿಸುತ್ತಿದ್ದೇನೆ. ನನಗೆ ಶಾಂತಿ,ವಿಶ್ರಾಂತಿ ಮತ್ತು ಪ್ರೀತಿ ಬೇಕು. ಆದರೆ ಈ ಜಗತ್ತಿನಲ್ಲಿ ಇವುಗಳನ್ನು ಎಂದೂ ಪಡೆಯದಿರಬಹುದಾದ ನನ್ನಂಥ ಜನರಿದ್ದಾರೆ. ಇರಲಿ...ಏಕೆಂದರೆ ಅಂತ್ಯದಲ್ಲಿ ಎಲ್ಲವೂ ಅಂತ್ಯವಾಗುತ್ತದೆ.

- ಜಹನಾರ ಬೇಗಂ

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News