ನಾಳೆ ಗೋವಾ ಮುಖ್ಯಮಂತ್ರಿಯಾಗಿ ಪಾರಿಕ್ಕರ್ ಪದಗ್ರಹಣ
ಪಣಜಿ, ಮಾ,.13: ಬಿಜೆಪಿ ಮುಖಂಡ ಮನೋಹರ್ ಪಾರಿಕ್ಕರ್ ಮಂಗಳವಾರ ಗೋವಾದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
‘‘ನಾನು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿದ್ದೇನೆ. ನಾಳೆ ಸಂಜೆ ಸಂಪುಟ ಸಚಿವರೊಂದಿಗೆ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುವೆ ಎಂದು ಪಾರಿಕ್ಕರ್ ತಿಳಿಸಿದ್ದಾರೆ.
ಎಷ್ಟು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ? ಎಂದು ಕೇಳಿದಾಗ, ‘‘ಎಷ್ಟು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಹಾಗೂ ಇತರ ವಿಷಯಕ್ಕೆ ಸಂಬಂಧಿಸಿ ಈಗ ಚರ್ಚೆ ನಡೆಯುತ್ತಿದೆ. ಸಚಿವ ಸಂಪುಟ ಪಟ್ಟಿ ಅಂತಿಮಗೊಂಡ ಬಳಿಕ ನಾವು ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ’’ ಎಂದು ಪಾರಿಕ್ಕರ್ ಉತ್ತರಿಸಿದರು.
ಬಿಜೆಪಿ ತನಗೆ 21 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ರವಿವಾರ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಪಾರಿಕ್ಕರ್‌ಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದರು.
ಪ್ರಮಾಣವಚನ ಸ್ವೀಕರಿಸಿದ 15 ದಿನಗಳ ಬಳಿಕ ಬಹುಮತವನ್ನು ಸಾಬೀತುಪಡಿಸಬೇಕು ಎಂದು ರಾಜ್ಯಪಾಲರು ಪಾರಿಕ್ಕರ್‌ಗೆ ಸೂಚಿಸಿದ್ದಾರೆ. ರವಿವಾರ ಸಂಜೆ ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಪಾರಿಕ್ಕರ್‌ರನ್ನು ಗೋವಾದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಿರ್ಧರಿಸಲಾಗಿತ್ತು. ಸೋಮವಾರ ಪಾರಿಕ್ಕರ್ ರಕ್ಷಣಾ ಸಚಿವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರವಾಡಿ ಗೋಮಂತಕ್ ಪಾರ್ಟಿ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿಗಳು ಪಾರಿಕ್ಕರ್‌ರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರೆ ಮಾತ್ರ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುವುದಾಗಿ ಷರತ್ತು ವಿಧಿಸಿದ್ದವು ಎನ್ನಲಾಗಿದೆ.