ಗೋವಾದ ಭಾವಿ ಮುಖ್ಯಮಂತ್ರಿ ಪಾರಿಕ್ಕರ್‌ಗೆ ಕ್ಷೇತ್ರವೇ ಇಲ್ಲ

Update: 2017-03-13 11:04 GMT

ಪಣಜಿ,ಮಾ.13: ಗೋವಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಮನೋಹರ ಪಾರಿಕ್ಕರ್ ಅವರು ಮುಖ್ಯಮಂತ್ರಿ ಹುದ್ದೆಗೇರಲು ರಂಗ ಸಜ್ಜುಗೊಳ್ಳುತ್ತಿದೆ. ಆದರೆ ಆತಂಕದ ಸನ್ನಿವೇಶವೊಂದು ಉದ್ಭವಿಸಿದೆ.

ಮೂಲಗಳು ತಿಳಿಸಿರುವಂತೆ ಹಾಲಿ ಸಂಸದರಾಗಿರುವ ಪಾರಿಕ್ಕರ್ ಮಾಪುಸಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ. ಗೋವಾ ಉಪಮುಖ್ಯಮಂತ್ರಿಯಾಗಿದ್ದು, ಮಾಪುಸಾದಿಂದ ಗೆದ್ದಿರುವ ಫ್ರಾನ್ಸಿಸ್ ಡಿಸೋಝಾ ಅವರಿಗೆ ಕ್ಷೇತ್ರವನ್ನು ತೆರವುಗೊಳಿಸುವಂತೆ ಪಕ್ಷವು ನಿರ್ದೇಶ ನೀಡಿದೆಯಾದರೂ ಅವರು ಅದನ್ನು ಪಾಲಿಸುವ ಬಗ್ಗೆ ಶಂಕೆಗಳಿವೆ.

ರವಿವಾರ ಸುದ್ದಿಗೋಷ್ಠಿಯಲ್ಲಿ ಪಾರಿಕ್ಕರ್‌ಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದೀರಿ ಎಂದು ಸುದ್ದಿಗಾರರು ಪ್ರಶ್ನಿಸಿದ್ದರು. ಸ್ಪಷ್ಟ ಉತ್ತರ ನೀಡುವುದರಿಂದ ನುಣುಚಿಕೊಂಡಿದ್ದ ಅವರು,ಆ ಕುರಿತು ನಂತರ ಮಾತನಾಡುತ್ತೇನೆ ಎಂದಷ್ಟೇ ಹೇಳಿದ್ದರು.

   ಇದೀಗ ಪಾರಿಕ್ಕರ್‌ಗೆ ಕ್ಷೇತ್ರ ಒದಗಿಸುವ ವಿಷಯ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಸಂಘರ್ಷಕ್ಕೆ ಕಾರಣವಾಗಬಹುದು. ಪಾರಿಕ್ಕರ್ ಈ ಹಿಂದೆ ಗೋವಾದ ಮುಖ್ಯಮಂತ್ರಿಯಾಗಿ ದ್ದಾಗಲೂ ಡಿಸೋಜಾ ಉಪಮುಖ್ಯಮಂತ್ರಿಯಾಗಿದ್ದರು. ಆದರೆ 2014ರಲ್ಲಿ ಪಾರಿಕ್ಕರ್ ದೇಶದ ರಕ್ಷಣಾ ಸಚಿವರಾಗಲು ಕೇಂದ್ರಕ್ಕೆ ತೆರಳಿದಾಗ ಡಿಸೋಝಾಗೆ ಬಡ್ತಿ ಸಿಕ್ಕಿರಲಿಲ್ಲ, ಬದಲಿಗೆ ಲಕ್ಷ್ಮೀಕಾಂತ ಪಾರ್ಸೇಕರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿತ್ತು. ಈ ಬಗ್ಗೆ ಡಿಸೋಝಾ ಆಗ ಅಸಮಾಧಾನದ ಸಂಕೇತಗಳನ್ನು ವ್ಯಕ್ತಪಡಿಸಿದ್ದರು. ಗೋವಾದಲ್ಲಿ ತಾನು ಬಿಜೆಪಿಯ ನಮ್ರ ಸೇವಕನಾಗಿದ್ದೇನೆ ಮತ್ತು ಬಹಳ ಕಾಲದಿಂದ ಮಾಪುಸಾದಿಂದ ಪಕ್ಷದ ಶಾಸಕನಾಗಿದ್ದೇನೆ ಎಂದು ಅವರು ಬೆಟ್ಟು ಮಾಡಿದ್ದರು.

ಇದು ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಅವರು ಮಾಪುಸಾ ಕ್ಷೇತ್ರವನ್ನು ತೆರವುಗೊಳಿಸಲು ನಿರಾಕರಿಸಿದರೆ ಪಾರಿಕ್ಕರ್ ಬೇರೆ ಪರ್ಯಾಯಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ.

ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ಪಾರಿಕ್ಕರ್ ಅವರಿಗೆ ರಾಜ್ಯದಲ್ಲಿ ನೂತನ ಸರಕಾರ ರಚನೆಗೆ ಆಹ್ವಾನಿಸಿದ್ದು, ಸದನದಲ್ಲಿ ಬಹುಮತ ಸಾಬೀತುಗೊಳಿಸಲು 15 ದಿನಗಳ ಗಡುವು ನೀಡಿದ್ದಾರೆ. ಪಕ್ಷದ 13 ಶಾಸಕರ ಜೊತೆಗೆ ತನ್ನನ್ನು ಬೆಂಬಲಿಸಿರುವ ಇತರ ಎಂಟು ಶಾಸಕರ ಪಟ್ಟಿಯನ್ನು ಪಾರಿಕ್ಕರ್ ರಾಜ್ಯಪಾಲರಿಗೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News