ಸಿಎಂ ಇಬೋಬಿ ಸಿಂಗ್ ರಾಜೀನಾಮೆಗೆ ಮಣಿಪುರ ರಾಜ್ಯಪಾಲರ ಸೂಚನೆ

Update: 2017-03-13 12:42 GMT

ಇಂಫಾಲ,ಮಾ.13: ಮುಂದಿನ ಸರಕಾರ ರಚನೆ ಪ್ರಕ್ರಿಯೆಯನ್ನು ಆರಂಭಿಸಲು ಅನುಕೂಲವಾಗುವಂತೆ ತಕ್ಷಣವೇ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ಮಣಿಪುರದ ಹಾಲಿ ಮುಖ್ಯಮಂತ್ರಿ ಒಕ್ರಂ ಇಬೋಬಿ ಸಿಂಗ್ ಅವರಿಗೆ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರು ಸೂಚಿಸಿದ್ದಾರೆ. ಇಬೋಬಿ ಸಿಂಗ್ ಅವರು ಉಪಮುಖ್ಯಮಂತ್ರಿ ಗೈಖಾಂಗಾಂ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಹಾವೊಕಿಪ್ ಅವರೊಂದಿಗೆ ರವಿವಾರ ರಾತ್ರಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. ತಾನು ನೂತನ ಸರಕಾರ ರಚನೆ ಪ್ರಕ್ರಿಯೆಯನ್ನು ಆರಂಭಿಸಲು ಸಾಧ್ಯವಾಗುವಂತೆ ತಕ್ಷಣವೇ ರಾಜೀನಾಮೆ ಸಲ್ಲಿಸುವಂತೆ ಅವರು ಇಬೋಬಿ ಸಿಂಗ್‌ಗೆ ಸೂಚಿಸಿದ್ದಾರೆ ಎಂದು ರಾಜಭವನದಲ್ಲಿನ ಉನ್ನತ ಮೂಲವೊಂದು ತಿಳಿಸಿದೆ.

ನಿಯಮಾವಳಿಯಂತೆ ಹಾಲಿ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸುವವರೆಗೆ ನೂತನ ಸರಕಾರ ರಚನೆ ಪ್ರಕ್ರಿಯೆಯನ್ನು ಆರಂಭಿಸುವಂತಿಲ್ಲ ಎಂದು ಈ ಮೂಲವು ಹೇಳಿದೆ.

ರಾಜ್ಯಪಾಲರೊಂದಿಗೆ ಭೇಟಿ ಸಂದರ್ಭ ಇಬೋಬಿ ಸಿಂಗ್ ಅವರು 28 ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ತೋರಿಸಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು. ನಾಲ್ವರು ಎನ್‌ಪಿಪಿ ಶಾಸಕರ ಬೆಂಬಲವನ್ನು ಹೊಂದಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಸಾದಾ ಕಾಗದದ ತುಂಡೊಂದರಲ್ಲಿ ಎನ್‌ಪಿಪಿಯ ನಾಲ್ವರು ಶಾಸಕರ ಹೆಸರುಗಳನ್ನು ನೋಡಿದ ಹೆಫ್ತುಲ್ಲಾ ಎನ್‌ಪಿಪಿ ಅಧ್ಯಕ್ಷರು ಮತ್ತು ಶಾಸಕರನ್ನು ಕರೆತರುವಂತೆ ಅವರಿಗೆ ಸೂಚಿಸಿದ್ದರು ಎಂದು ಮೂಲವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News