ಪಂಚರಾಜ್ಯಗಳ ಚುನಾವಣೆ ಫಲಿತಾಂಶ: ರಾಜ್ಯಸಭೆಯಲ್ಲೂ ಬಿಜೆಪಿ ಬಲವರ್ಧನೆಗೆ ಅವಕಾಶ
ಹೊಸದಿಲ್ಲಿ, ಮಾ.13: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬೀಸಿದ ಬಿಜೆಪಿ ‘ಸುನಾಮಿ’ಯಿಂದ ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ ಗಮನಾರ್ಹವಾಗಿ ಏರಿದ ಜೊತೆಗೇ , ಜುಲೈಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆಯ ಮೇಲೂ ಪರಿಣಾಮ ಬೀರಿದೆ. ಅಲ್ಲದೆ ಇದೀಗ ಬಹುಮತದ ಕೊರತೆ ಇರುವ ರಾಜ್ಯಸಭೆಯಲ್ಲೂ ತನ್ನ ಶಕ್ತಿಯನ್ನು ಗಮನಾರ್ಹವಾಗಿ ವೃದ್ಧಿಸಿಕೊಳ್ಳುವ ಅವಕಾಶವನ್ನು ನೀಡಿದೆ.
ಉತ್ತರಪ್ರದೇಶದಲ್ಲಿ 325, ಉತ್ತರಾಖಂಡದಲ್ಲಿ 57 ಮತ್ತು ಮಣಿಪುರದಲ್ಲಿ 21 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಕಾರಣ ಎನ್‌ಡಿಎ ಕೂಟದ ಅಭ್ಯರ್ಥಿಗೆ ರಾಷ್ಟ್ರಪತಿ ಭವನದ ದಾರಿ ಇನ್ನಷ್ಟು ಸುಲಭವಾಗಿದೆ .
ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಮತದಾರರ ಗುಂಪಿನಲ್ಲಿ 776 ಸಂಸದರು ಮತ್ತು 4,120 ಶಾಸಕರು ಇರುತ್ತಾರೆ. ಮತದಾರರ ಗುಂಪಿನ ಮತದ ಒಟ್ಟು ವೌಲ್ಯ 10,98,882 ಮತಗಳು . 5,49,442 ಮತಗಳನ್ನು ಅರ್ಧಾಂಶ ಪಾಲು ಎಂದು ವಿಂಗಡಿಸಲಾಗಿದ್ದು ರಾಷ್ಟ್ರಪತಿ ಆಯ್ಕೆಗೆ ಇಷ್ಟು ಮತಗಳ ಅಗತ್ಯವಿದೆ. ಎನ್‌ಡಿಎಗೆ ಈಗ ಕೇವಲ 25 ಸಾವಿರ ಮತಗಳ ಕೊರತೆಯಿದೆ. ಬಿಜು ಜನತಾದಳ, ಎಐಎಡಿಎಂಕೆ ಇತ್ಯಾದಿ ಮಿತ್ರಪಕ್ಷಗಳ ನೆರವಿನಿಂದ ಈ ಕೊರತೆಯನ್ನು ಸುಲಭದಲ್ಲಿ ಸರಿದೂಗಿಸುವ ವಿಶ್ವಾಸದಲ್ಲಿ ಎನ್‌ಡಿಎ ಕೂಟವಿದೆ.
ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತದ ಕೊರತೆಯಿದೆ. 2018ರ ಆಗಸ್ಟ್‌ನಲ್ಲಿ ಮಾಯಾವತಿ ಸೇರಿದಂತೆ ಉತ್ತರಪ್ರದೇಶದ 10 ಸದಸ್ಯರು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ. ಉತ್ತರಪ್ರದೇಶ ವಿಧಾನಸಭೆಯಲ್ಲಿ ಕೇವಲ 19 ಶಾಸಕರನ್ನು ಹೊಂದಿರುವ ಬಿಎಸ್ಪಿಗೆ, ತನ್ನ ನಾಯಕಿ ಮಾಯಾವತಿಯನ್ನು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡುವುದು ಕಠಿಣವಾಗಲಿದೆ. ಮತ್ತೊಂದೆಡೆ, ಇದರಲ್ಲಿ ಹೆಚ್ಚಿನ ಸ್ಥಾನ ತನ್ನ ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸುಲಭದ ಅವಕಾಶವಿದೆ. ಒಟ್ಟಾರೆಯಾಗಿ ಮುಂದಿನ ವರ್ಷದ ಆಗಸ್ಟ್ ವೇಳೆಗೆ 58 ಸದಸ್ಯರು ನಿವೃತ್ತರಾಗಲಿದ್ದು , ಬಿಜೆಪಿಯು ಇದರಲ್ಲಿ ಕನಿಷ್ಠ ಅರ್ಧಾಂಶದಷ್ಟು ಸ್ಥಾನಗಳನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಅದಾಗ್ಯೂ, ಕಾಂಗ್ರೆಸ್ ಈ ಬೆಳವಣಿಗೆಯ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈ ಸಂಖ್ಯೆ ಅವರಲ್ಲಿ ವಿಶ್ವಾಸವನ್ನು ಹುಟ್ಟಿಸಬಹುದು. ಸಾಮಾನ್ಯ ಚುನಾವಣೆಯಲ್ಲಿ ಜನರ ಸಮಸ್ಯೆಗಳನ್ನು ಮುಂದಿಟ್ಟು ಗೆಲ್ಲಬಹುದು. ರಾಷ್ಟ್ರಪತಿ ಚುನಾವಣೆಯ ವಿಷಯ ಹಾಗಲ್ಲ ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಸಿ.ಚಾಕೊ.
ಮೋದಿ ಸರಕಾರದ ಭೂಸ್ವಾಧೀನ ಮಸೂದೆ ಅಥವಾ ಮಧ್ಯಾಹ್ನದ ಬಿಸಿಯೂಟಕ್ಕೆ ಆಧಾರ್ ಕಡ್ಡಾಯಗೊಳಿಸುವ ಯೋಜನೆ- ಇವೆಲ್ಲದಕ್ಕೆ ಕಾಂಗ್ರೆಸ್ ಪಕ್ಷದ ಒತ್ತಡವೇ ಕಾರಣ ಎಂದ ಚಾಕೊ, ಅಗತ್ಯವಿದ್ದೆಡೆ ಸರಕಾರವನ್ನು ವಿರೋಧಿಸುವ ಕಾರ್ಯ ಮುಂದುವರಿಸುತ್ತೇವೆ ಎಂದು ತಿಳಿಸಿದರು.