×
Ad

ವಿಟ್ಲ ರಸ್ತೆ ಡಾಮರೀಕರಣಗೊಳಿಸುವಂತೆ ಪ್ರತಿಭಟನೆ

Update: 2017-03-13 19:43 IST

ವಿಟ್ಲ, ಮಾ.13: ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಕುಳ ಹಾಗೂ ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬಕ-ಕೊಡಿಪ್ಪಾಡಿ-ಓಜಾಲ-ಕುಂಡಡ್ಕ ಜಿಲ್ಲಾ ಪಂಚಾಯತ್ ರಸ್ತೆಗೆ ಡಾಮರೀಕರಣ ನಡೆಸುವಂತೆ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಪುತ್ತೂರು ತಾಲ್ಲೂಕಿನ ಕಬಕ, ಕೊಡಿಪ್ಪಾಡಿ ಹಾಗೂ ಬಂಟ್ವಾಳ ತಾಲ್ಲೂಕಿನ ವಿಟ್ಲ ಮುಡ್ನೂರು ಗ್ರಾಮಗಳ ವ್ಯಾಪ್ತಿಯ ಈ ರಸ್ತೆ ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ರಸ್ತೆಯಲ್ಲಿ ಮೋರಿ, ಚರಂಡಿ, ಟಾರುಗಳು ನಾಪತ್ತೆಯಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಮಾಡಲು ಸಾರ್ವಜನಿಕರು ತೀವ್ರ ಬವಣೆ ಪಡುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹನಿಯೂರು ಅವರು ಮಳೆ ನೀರು ರಸ್ತೆಯಲ್ಲಿಯೇ ಹರಿಯುವ ಪರಿಣಾಮ ರಸ್ತೆ ತೀವ್ರ ದುರಸ್ತಿಯಲ್ಲಿದೆ. ರೈತಾಪಿ ವರ್ಗದ ಮಂದಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಶಾಲಾ ವಾಹನಗಳು, ಆಟೋ ರಿಕ್ಷಾಗಳು ಸಂಚಾರ ಮಾಡಲು ಅಸಾಧ್ಯವಾಗಿದೆ ಎಂದು ದೂರಿದರು.

ಈ ರಸ್ತೆಯು ಓಜಾಲ ಶಾಲೆ, ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ, ವಿಟ್ಲ,ಪುಣಚ, ಪರಿಯಾಲ್ತಡ್ಕ ಮೂಲಕ ಅಡ್ಕಸ್ಥಳ, ಕಾಸರಗೋಡು ಕಡೆಗೆ ನೇರ ಸಂಪರ್ಕ ಕಲ್ಪಿಸುತ್ತಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 64 ಕೋಟಿ ರೂ. ಅನುದಾನದ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲಗೊಂಡಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳಿಗೆ, ಸಚಿವರಿಗೆ, ವಿವಿಧ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ. ಕೆಲವು ವರ್ಷಗಳ ಹಿಂದೆ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಲಾಗಿತ್ತು. ಈ ರಸ್ತೆ ಅಭಿವೃದ್ಧಿಗೆ ಹೋರಾಟ ಮಾಡಿದಾಗ ಮಾತ್ರ ಜನಪ್ರತಿನಿಧಿಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ವಂಚನೆ ಮಾಡುತ್ತಿದ್ದಾರೆ ವಿನಃ ಯಾವುದೇ ಕಾಮಗಾರಿಗೆ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು, ಕಿರಿಯ ಇಂಜಿನಿಯರ್ ಪದ್ಮರಾಜ್ ಹಾಗೂ ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ ಭಕ್ತ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿ ಮನವೊಲಿಸಲು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಬಳಿಕ ಪ್ರತಿಭಟನಾಕಾರರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಪ್ರತಿಭಟನಾಕಾರ ಮನವೊಲಿಸಿದರು. ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡ ರಸ್ತೆ ಮಧ್ಯಾಹ್ನವರೆಗೂ ಮುಂದುವರಿದಿತ್ತು. ಇಷ್ಟು ದೀರ್ಘ ಅವಧಿ ಪ್ರತಿಭಟನೆ ಮುಂದುವರಿದಿತ್ತಾದರೂ ಯಾವುದೇ ಒಬ್ಬ ಜನಪ್ರತಿನಿಧಿ ಇತ್ತ ಕಡೆ ತಲೆ ಹಾಕದ ಕಾರಣ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗಲು ಕಾರಣವಾಯಿತು.

ನನ್ನಲ್ಲಿ ಕೇಳಿ ಪ್ರತಿಭಟನೆ ನಡೆಸಿದ್ದೀರಾ..? ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ: 

ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ಅವರು ಸ್ಥಳಕ್ಕಾಗಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದಾಗ ನನ್ನಲ್ಲಿ ಕೇಳಿ ನೀವು ಪ್ರತಿಭಟನೆ ಹಮ್ಮಿಕೊಂಡಿದ್ದೀರಾ..? ಎಂದು ಉಡಾಫೆ ಹಾಗೂ ಬೇಜವಾಬ್ದಾರಿ ಮಾತುಗಳನ್ನಾಡಿರುವುದು ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳಿಸಿತು.

ಇದೇ ವೇಳೆ ಪಂಚಾಯತ್ ಪಿಡಿಒ ಗೋಕುಲದಾಸ ಭಕ್ತ ಅವರು ಕೂಡಾ ಪ್ರತಿಭಟನಾಕಾರರ ಯಾವುದೇ ಬೇಡಿಕೆಗೆ ಕನಿಷ್ಠ ಸ್ಪಂದನೆಯ ಪ್ರಯತ್ನ ನಡೆಸದೆ ಸ್ಥಳದಿಂದ ಕಾಲ್ಕಿತ್ತಿದ್ದು ಕೂಡಾ ಪ್ರತಿಭಟನಾಕಾರರ ಕೋಪ ನೆತ್ತಗೇರುವಂತೆ ಮಾಡಿತ್ತು.

ಕೊನೆಗೂ ಪ್ರತಿಭಟನಾಕಾರರ ಬಿಗಿಪಟ್ಟಿಗೆ ಮಣಿದು ಸ್ಥಳಕ್ಕಾಗಮಿಸಿದ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ಅವರು ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾ ಪಂಚಾಯತ್‌ಗೆ ಕಳುಹಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ನಾರಾಯಣ ಶೆಟ್ಟಿ, ಉಮ್ಮರ್ ಕೋರೆ, ಮೂಸೆ ಕುಂಞ, ಉಮ್ಮರ್ ಪಾರೂಕ್, ಕೇಶವ ಪೆಲತ್ತಡಿ, ಸರೋಜಿನಿ, ತಿಲಕ, ಸುಜಿತಾ, ಸ್ಮಿತಾ, ಸಲಾಂ ಕಬಕ, ದಯಾನಂದ, ಲಿಂಗಪ್ಪ ಗೌಡ, ಮುರಳೀಧರ, ಗಣೇಶ ಓಜಾಲ, ರೋಹಿತ್, ರಮೇಶ್ ಭಂಡಾರಿ, ಭರತ್ ಓಜಾಲ, ಭಾಸ್ಕರ ಅಂಜಲ, ವಿನಯ್, ಸಮೀರ್, ನವೀನ, ಮಣಿಕಾಂತ್, ಹರೀಶ, ಚೇತನ್, ಮೊಯಿದು ಕುಂಞ, ಗ್ರಾಮ ಪಂಚಾಯತ್ ಸದಸ್ಯ ಕರುಣಾಕರ, ಜಯರಾಮ ಕಾರ್ಯಾಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News