ಮಂಗಳೂರು: ಯೋಗೇಶ್ ಮಾಸ್ಟರ್ ಮೇಲಿನ ಹಲ್ಲೆಗೆ ಖಂಡನೆ
ಮಂಗಳೂರು, ಮಾ.13: ದಾವಣಗೆರೆಯಲ್ಲಿ 'ಲಂಕೇಶ್ 82' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ, ಚಲನಚಿತ್ರ ನಿರ್ದೇಶಕ, ಪ್ರಗತಿಪರ ಹೋರಾಟಗಾರ ಯೋಗೇಶ್ ಮಾಸ್ಟರ್ ಮೇಲೆ ಸಂಘಪರಿವಾರಕ್ಕೆ ಸೇರಿದ ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಹೇಯ ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಲ್ಲೆಯು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿಯಾಗಿದೆ ಮತ್ತು ಸಂವಿಧಾನದ ಆಶಯಗಳನ್ನು ಸದಾ ವಿರೋಧಿಸುತ್ತಿರುವ ವಿಕ್ಷಿಪ್ತ ಮನೋಸ್ಥಿತಿಯ ಸಂಘಪರಿವಾರದ ಅಸಹಿಷ್ಣುತೆಯ ಪ್ರದರ್ಶನವೂ ಆಗಿದೆ. ಕರ್ನಾಟಕದಲ್ಲಿ ಈ ಹಿಂದೆಯೂ ಸಂಘಪರಿವಾರದ ದುಷ್ಕರ್ಮಿಗಳು ಸಾಹಿತಿಗಳ, ಪ್ರಗತಿಪರರ ಮೇಲೆ ಇಂತಹ ಹಲ್ಲೆ, ಕೊಲೆಗಳನ್ನು ನಡೆಸಿದ್ದಾರೆ. ಸಂಘಪರಿವಾರದ ಅಸಹಿಷ್ಣುತೆಯನ್ನು ವಿರೋಧಿಸಿದ ಕಾರಣಕ್ಕೆ ಸಂಶೋಧಕ ಎಂ.ಎಂ. ಕಲ್ಬುರ್ಗಿ ಹತ್ಯೆ, ಮಾಹಿತಿ ಹಕ್ಕು ಹೋರಾಟಗಾರ ವಿನಾಯಕ ಬಾಳಿಗ ಹತ್ಯೆ ಇತ್ಯಾದಿ ಕೆಲವು ಉದಾಹರಣೆಗಳಷ್ಟೆ.
ಇದೀಗ ಸಂಘಪರಿವಾರದ ಗೂಂಡಾಗಳು ಯೋಗೇಶ್ ಮಾಸ್ಟರ್‌ರವರ ಮೇಲೆ ಮಸಿ ಚೆಲ್ಲಿದ್ದಾರೆ. ಪದೇ ಪದೇ ನಡೆಯುವ ದಾಳಿಯ ಪುನರಾವರ್ತನೆಯು ಸರಕಾರ ಸಂಘಪರಿವಾರದ ಮೇಲೆ ತಳೆದ ಮೃದು ಧೋರಣೆಯೇ ಕಾರಣವೆಂದು ಭಾವಿಸಬೇಕಾಗುತ್ತದೆ. ಒಂದು ವೇಳೆ ಇಂತಹ ಕೃತ್ಯ ನಡೆಸುವ ವ್ಯಕ್ತಿ ಮತ್ತು ಸಂಘಟನೆಯ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರಕಾರ ಮುತುವರ್ಜಿ ವಹಿಸಿದ್ದರೆ ಇಂತಹ ಪುಂಡಾಟಿಕೆ ಪುನರಾರ್ತನೆ ಆಗುತ್ತಿರಲಿಲ್ಲ. ದೇಶದ ಉನ್ನತ ಸಾಹಿತಿ ಪ್ರಶಸ್ತಿ ವಿಜೇತ ದಿ.ಅನಂತಮೂರ್ತಿಯವರ ನಿಧನದ ವೇಳೆ ಇದೇ ಸಂಘಪರಿವಾರ ಪಟಾಕಿ ಹಚ್ಚಿ ಸಂಭ್ರಮಿಸಿದ್ದನ್ನು ಕರ್ನಾಟಕದ ಜನತೆ ಮರೆತಿಲ್ಲ. ಆದುದರಿಂದ ಸರಕಾರ ತಕ್ಷಣ ಎಚ್ಚೆತ್ತು ಇಂತಹ ದುಷ್ಕತ್ಯಗಳಿಗೆ ಕುಮ್ಮಕ್ಕು ನೀಡುವ ಸಂಘಟನೆ, ವ್ಯಕ್ತಿಗಳ ಮೇಲೆ ತಕ್ಷಣ ಸೂಕ್ತ ಕ್ರಮಕೈಗೊಂಡು ರಾಜ್ಯದ ಶಾಂತಿಯನ್ನು ಕಾಪಾಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.