×
Ad

ಸಿರಿಯ: 2016ರಲ್ಲಿ ಮಕ್ಕಳ ವಿರುದ್ಧ ಭೀಕರ ಹಿಂಸಾಚಾರ - ಯನಿಸೆಫ್

Update: 2017-03-13 19:48 IST

ಬೆರೂತ್, ಮಾ. 13: ಯುದ್ಧಪೀಡಿತ ಸಿರಿಯದಲ್ಲಿ ಮಕ್ಕಳ ವಿರುದ್ಧದ ಹಿಂಸಾಚಾರ 2016ರಲ್ಲಿ ಅತ್ಯಂತ ತೀವ್ರವಾಗಿತ್ತು ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಸೋಮವಾರ ಹೇಳಿದೆ. ಅಲ್ಲಿನ ಸಂಘರ್ಷ ಏಳನೆ ವರ್ಷಕ್ಕೆ ಕಾಲಿರಿಸುತ್ತಿದೆ.

ಮಕ್ಕಳನ್ನು ಕೊಂದ, ಅಂಗ ಊನಗೊಳಿಸಿದ ಅಥವಾ ಸಶಸ್ತ್ರ ಗುಂಪುಗಳಿಗೆ ಅವರನ್ನು ನೇಮಿಸಿದ ಪ್ರಕರಣಗಳು ಕಳೆದ ವರ್ಷ ಅತ್ಯಧಿಕವಾಗಿತ್ತು ಎಂದು ಅದು ಹೇಳಿದೆ.

‘‘ಮಕ್ಕಳು ಅನುಭವಿಸಿದ ವೇದನೆ ಹಿಂದೆಂದೂ ಇರದಷ್ಟಿತ್ತು. ಸಿರಿಯದಲ್ಲಿ ಲಕ್ಷಾಂತರ ಮಕ್ಕಳು ಪ್ರತಿ ದಿನವೆಂಬಂತೆ ದಾಳಿಗೊಳಗಾಗುತ್ತಿದ್ದಾರೆ. ಅವರ ಬದುಕು ನಿರ್ನಾಮವಾಗುತ್ತಿದೆ’’ ಎಂದು ಯುನಿಸೆಫ್‌ನ ಪ್ರಾದೇಶಿಕ ನಿರ್ದೇಶಕ ಗೀರ್ಟ್ ಕ್ಯಾಪಲೇರ್ ಹೇಳಿದರು.

‘‘ಪ್ರತಿ ಮಕ್ಕಳ ಆರೋಗ್ಯ, ಸುರಕ್ಷತೆ ಮತ್ತು ಭವಿಷ್ಯದ ಮೇಲೆ ದಾಳಿಗಳಾಗುತ್ತಿದ್ದು, ಅವುಗಳ ಭೀಕರ ನೆನಪುಗಳು ಜೀವನಪರ್ಯಂತ ಕಾಡಲಿವೆ’’ ಸಿರಿಯದ ಮಧ್ಯ ಭಾಗದ ನಗರ ಹಾಮ್ಸ್‌ನಲ್ಲಿ ಮಾತನಾಡಿದ ಅವರು ಹೇಳಿದರು.

ಕಳೆದ ವರ್ಷ ಸಿರಿಯದಲ್ಲಿ ಕನಿಷ್ಠ 652 ಮಕ್ಕಳು ಹಿಂಸೆಗೆ ಗುರಿಯಾಗಿ ಮೃತಪಟ್ಟಿದ್ದಾರೆ ಎಂಬುದಾಗಿ ಯುನಿಸೆಫ್ ದಾಖಲಿಸಿದೆ. ಇದು 2015ರ ಸಂಖ್ಯೆಗೆ ಹೋಲಿಸಿದರೆ 20 ಶೇಕಡದಷ್ಟು ಹೆಚ್ಚಾಗಿದೆ. ಅವರ ಪೈಕಿ 250ಕ್ಕೂ ಅಧಿಕ ಮಂದಿ ಶಾಲೆಯೊಂದರ ಒಳಗೆ ಅಥವಾ ಸಮೀಪದಲ್ಲಿ ಮೃತಪಟ್ಟಿದ್ದಾರೆ.

ಕನಿಷ್ಠ 850 ಮಕ್ಕಳನ್ನು ಹೋರಾಟದಲ್ಲಿ ಬಳಸಲಾಗಿದೆ. ಅವರನ್ನು ಮರಣದಂಡನೆ ಶಿಕ್ಷೆ ನೀಡುವವರು ಅಥವಾ ಆತ್ಮಹತ್ಯಾ ಬಾಂಬರ್‌ಗಳನ್ನಾಗಿ ಉಪಯೋಗಿಸಲಾಗುತ್ತಿದೆ. ಇದು 2015ರ ಸಂಖ್ಯೆಯ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

6 ವರ್ಷದ ಸಂಘರ್ಷದಲ್ಲಿ 3.1 ಲಕ್ಷ ಸಾವು

ಅಧ್ಯಕ್ಷ ಬಶರ್ ಅಲ್ ಅಸದ್ ವಿರುದ್ಧ ಪ್ರತಿಪಕ್ಷಗಳು ಬಂಡಾಯ ಘೋಷಿಸುವುದರೊಂದಿಗೆ ಸಿರಿಯ ಸಂಘಷ 2011 ಮಾರ್ಚ್‌ನಲ್ಲಿ ಆರಂಭಗೊಂಡಿದೆ. 3.1 ಲಕ್ಷಕ್ಕಿಂತಲೂ ಅಧಿಕ ಮಂದಿ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ.

ಸುಮಾರು 23 ಲಕ್ಷ ಸಿರಿಯನ್ ಮಕ್ಕಳು ಟರ್ಕಿಯಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ.
2.8 ಲಕ್ಷ ಮಕ್ಕಳು ಸಿರಿಯದಾದ್ಯಂತ ಅಹಾರ ಮತ್ತು ಔಷಧಿಯಿಲ್ಲದೆ ಭೀತಿಯಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News