ಭರಾರ ಜೊತೆ ಫೋನ್‌ನಲ್ಲಿ ಮಾತನಾಡಲು ಯತ್ನಿಸಿದ್ದ ಟ್ರಂಪ್
ವಾಶಿಂಗ್ಟನ್, ಮಾ. 13: ನ್ಯೂಯಾರ್ಕ್ ಅಟಾರ್ನಿ ಪ್ರೀತ್ ಭರಾರ ಅವರನ್ನು ವಜಾಗೊಳಿಸುವ ಎರಡು ದಿನಗಳ ಮೊದಲು, ಅವರೊಂದಿಗೆ ಫೋನ್‌ನಲ್ಲಿ ಮಾತನಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಿಸಿದ್ದರು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭರಾರ ಸಲ್ಲಿಸಿದ ಸೇವೆಗಾಗಿ ಧನ್ಯವಾದ ಹೇಳಲು ಹಾಗೂ ಶುಭ ಹಾರೈಸಲು ಟ್ರಂಪ್ ಬಯಸಿದ್ದರು ಎಂದರು.
ಆದರೆ, ಅಧ್ಯಕ್ಷರ ಗುರುವಾರದ ಕರೆಯನ್ನು ಸ್ವೀಕರಿಸಲು ಭರಾರ ನಿರಾಕರಿಸಿದರು. ತನ್ನ ಮೇಲಧಿಕಾರಿಗಳ ಅನುಮತಿಯಿಲ್ಲದೆ ಅಧ್ಯಕ್ಷರೊಂದಿಗೆ ತಾನು ಮಾತನಾಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ರಾಜೀನಾಮೆ ಸಲ್ಲಿಸಬೇಕೆಂಬ ಸೂಚನೆಯನ್ನು ಧಿಕ್ಕರಿಸಿದ ಬಳಿಕ ತನ್ನನ್ನು ವಜಾಗೊಳಿಸಲಾಗಿದೆ ಎಂದು ಭರಾರ ಶನಿವಾರ ತಿಳಿಸಿದರು.
ಹುದ್ದೆಯಲ್ಲಿ ಮುಂದುವರಿಯಲು ಟ್ರಂಪ್ ತನಗೆ ಸೂಚಿಸಿದ್ದರು ಎಂಬುದಾಗಿ ನವೆಂಬರ್‌ನಲ್ಲಿ ಭರಾರ ಹೇಳಿದ್ದರು. ಹಾಗಾಗಿ, ಅವರನ್ನು ವಜಾಗೊಳಿಸುವ ನೂತನ ಕ್ರಮ ಹಲವರ ಹುಬ್ಬೇರಿಸಿದೆ.
ಸದರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್‌ನ ಚೀಫ್ ಫೆಡರಲ್ ಪ್ರಾಸಿಕ್ಯೂಟರ್ ಆಗಿ, ಭರಾರ ಹಲವಾರು ಪ್ರಮುಖ ಭ್ರಷ್ಟಾಚಾರ ಮತ್ತು ಬಿಳಿ-ಕಾಲರ್ ಕ್ರಿಮಿನಲ್ ಪ್ರಕರಣ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಭಯೋತ್ಪಾದನೆ ಆರೋಪಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನೂ ನಿಭಾಯಿಸಿದ್ದರು.
ಹಿಂದಿನ ಒಬಾಮ ಆಡಳಿತ ನೇಮಿಸಿದ್ದ 46 ಅಟಾರ್ನಿಗಳು ರಾಜೀನಾಮೆ ನೀಡಬೇಕೆಂದು ಕಾನೂನು ಇಲಾಖೆ ಶುಕ್ರವಾರ ಸೂಚನೆ ನೀಡಿತ್ತು.