ಅಜ್ಜರಕಾಡು ಆಸ್ಪತ್ರೆಗೆ ಜಿಲ್ಲಾಸ್ಪತ್ರೆಯ ಸ್ಥಾನಮಾನ: ಪ್ರಮೋದ್
ಉಡುಪಿ, ಮಾ.13: ಉಡುಪಿ ಜಿಲ್ಲೆ ಸ್ಥಾಪನೆಯಾಗಿ ಎರಡು ದಶಕಗಳ ಬಳಿಕ ಅಜ್ಜರಕಾಡಿನಲ್ಲಿರುವ ಸರಕಾರಿ ಆಸ್ಪತ್ರೆಗೆ ಜಿಲ್ಲಾಸ್ಪತ್ರೆಯ ಸ್ಥಾನಮಾನವನ್ನು ರಾಜ್ಯ ಸರಕಾರ ಅಧಿಕೃತವಾಗಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದರಿಂದ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳ ಸಂಖ್ಯೆ ಹೆಚ್ಚಲಿದೆ. ಸಿಬ್ಬಂದಿಗಳ ಸಂಖ್ಯೆ 123ರಿಂದ 195ಕ್ಕೇರಲಿದೆ. ಇವರಲ್ಲಿ ಹೆಚ್ಚಿನವರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಗೆ ಎಂಟು ವರ್ಷಗಳ ಬಳಿಕ ನೇಮಕಾತಿ ನಡೆಯುತ್ತಿದೆ ಎಂದರು.
ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು 124ರಿಂದ 250ಕ್ಕೆ ಏರಿಸಲಾಗಿದೆ. ಆಸ್ಪತ್ರೆಯ 27 ವೈದ್ಯರಲ್ಲಿ 26 ಮಂದಿ ಕರ್ತವ್ಯ ನಿರ್ವಹಿಸು ತಿದ್ದಾರೆ. ಹೊಸದಾಗಿ 50 ಮಂದಿ ನರ್ಸ್‌ಗಳ ನೇಮಕಾತಿಯೂ ಆಗಲಿದೆ. ಔಷಧಿ ಖರೀದಿಗೆ 20 ಲಕ್ಷ ರೂ. ಅನುದಾನ ಲಭ್ಯವಿದೆ. ಆದುದರಿಂದ ವೈದ್ಯರು ರೋಗಿಗಳಿಗೆ ಹೊರಗಿನಿಂದ ಔಷಧಿ ಖರೀದಿಗೆ ಚೀಟಿ ನೀಡಬಾರದು ಎಂದು ಅವರು ಸೂಚಿಸಿದರು.
ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ಪರಿಕರಗಳು ಲ್ಯವಾಗಲಿದ್ದು, ವೈದ್ಯರು ಈ ಎಲ್ಲಾ ಸೇವೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಸಚಿವರು ಸೂಚಿಸಿ ದರು. ಸದ್ಯದಲ್ಲಿ ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲೂ ಜೆನರಿಕೆ ಔಷಧಿ ಮಳಿಗೆಗಳನ್ನು ಪ್ರಾರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಿಹೆಚ್‌ಓ ಡಾ. ರೋಹಿಣಿ, ಎಚ್‌ಎಲ್‌ಎಲ್‌ನ ಮಣಿ ಮಿತ್ತಲ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಾವರದಲ್ಲಿ ಸರಕಾರಿ ಮೆಡಿಕಲ್ ಕಾಲೇಜ್?
ಉಡುಪಿ ಜಿಲ್ಲೆಯಲ್ಲೂ ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸುವಂತೆ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದೆ. ಈಗಾಗಲೇ ಸರಕಾರ ಮಂಜೂರಾತಿ ನೀಡಿದ ಜಿಲ್ಲೆಗಳಲ್ಲಿ ಕಾಲೇಜುಗಳನ್ನು ಆರಂಭಿಸಿದ ಬಳಿಕ ಉಡುಪಿಗೂ ಕಾಲೇಜು ಮಂಜೂರು ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಪ್ರಮೋದ್ ತಿಳಿಸಿದರು.
ಉಡುಪಿ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಯಲ್ಲಿ ಲಭ್ಯವಿರುವ 110 ಎಕರೆಯಲ್ಲಿ 25 ಎಕರೆಯನ್ನು ಬಳಸಿಕೊಳ್ಳುವ ಪ್ರಸ್ತಾಪವಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ ಬ್ರಹ್ಮಾವರದ ಸಮುದಾಯ ಆಸ್ಪತ್ರೆಯನ್ನು 30 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಲು 9 ಕೋಟಿ ರೂ. ಮಂಜೂರಾಗಿದೆ. ಸದ್ಯಕ್ಕೆ ಉಡುಪಿ ಆಸುಪಾಸಿನಲ್ಲಿ ಲಭ್ಯವಿರುವ ಜಾಗ ಇದಾಗಿದೆ ಎಂದರು.