ಉಪ್ಪಿನಂಗಡಿ: ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಸ್ಪೋಟ !
Update: 2017-03-14 12:04 IST
ಉಪ್ಪಿನಂಗಡಿ, ಮಾ.15: ಅಂಗಿಯ ಜೇಬಿನಲ್ಲಿದ್ದ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡ ಘಟನೆ ಉಪ್ಪಿನಂಗಡಿಯ ಬಳಿ ನಡೆದಿದೆ.
ಬಸ್ ಚಾಲಕ ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಸಂದೇಶ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಂದೇಶ್ ಅವರು ಶಿವಕೃಪ ಎಂಬ ಖಾಸಗಿ ಬಸ್‌ವೊಂದರಲ್ಲಿ ಚಾಲಕರಾಗಿದ್ದು, ಮಂಗಳವಾರ ಬೆಳಗ್ಗೆ ಮಡಂತ್ಯಾರಿನಿಂದ - ಉಪ್ಪಿನಂಗಡಿಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದಾಗ ದಾರಿ ಮಧ್ಯೆ ಅಳಕೆ ಬಳಿ ಇವರ ಅಂಗಿಯ ಜೇಬಿನಲ್ಲಿಟ್ಟಿದ್ದ ಮೊಬೈಲ್ ಏಕಾಏಕಿ ಸ್ಫೋಟಗೊಂಡು, ಬೆಂಕಿ ಹತ್ತಿಕೊಂಡಿದೆ. ಅಂಗಿಗೂ ಬೆಂಕಿ ತಗಲಿದ್ದು, ಈ ಸಂದರ್ಭ ಇವರು ಅಂಗಿ ತೆಗೆದು ಹೊರಗೆ ಬಿಸಾಡಿದ್ದರಿಂದ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.
ಮೊಬೈಲ್ ಸಿಡಿದಿದ್ದರಿಂದ ಸಂದೇಶ್ ಅವರ ಎಡಗಟ್ಟಿಗೆ ಸಣ್ಣ ಪ್ರಮಾಣದ ಏಟು ಬಿದ್ದಿದೆ. ಮೊಬೈಲ್ ಬ್ಯಾಟರಿ ಕರಟಿ ಹೋಗಿದೆ. ಇಂಟೆಕ್ಸ್ ಕಂಪೆನಿಯ ಟಚ್‌ಸ್ಕ್ರೀನ್ ಮೊಬೈಲ್ ಇದಾಗಿದ್ದು, ಕಳೆದ ಸುಮಾರು ಒಂದು ವರ್ಷದ ಹಿಂದೆ ಮೊಬೈಲ್ ಖರೀದಿಸಿದ್ದರು.