×
Ad

ಉತ್ತರ ಪ್ರದೇಶ ಸೋಲಿನ ಹೊಣೆ ಹೊತ್ತ ರಾಹುಲ್ ಗಾಂಧಿ

Update: 2017-03-14 13:39 IST

ಹೊಸದಿಲ್ಲಿ, ಮಾ.14: ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ತಾನು ಸಂಪೂರ್ಣ ಹೊಣೆ ಹೊರುತ್ತೇನೆ ಎಂದು ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದ ಬಳಿಕ ಮೊದಲ ಬಾರಿ ಸುದ್ದಿಗಾರರೊಂದಿಗೆ ರಾಹುಲ್ ಗಾಂಧಿ ಮಾತನಾಡಿದರು.

‘‘ನಾವು ವಿರೋಧ ಪಕ್ಷದಲ್ಲಿದ್ದೇವೆ. ನಾವು ಏರಿಳಿತ ಕಂಡಿದ್ದೇವೆ. ಉತ್ತರಪ್ರದೇಶದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದೇವೆ. ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮ ಪಕ್ಷ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿಯು ಹಣ ಹಾಗೂ ಅಧಿಕಾರ ಬಲದ ದುರುಪಯೋಗ ಮಾಡಿಕೊಂಡಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘‘ಬಿಜೆಪಿಯ ಸೈದ್ದಾಂತಿಕ ಸಿದ್ದಾಂತದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಲ್ಲಿ ಬಿಜೆಪಿ ಜನಾದೇಶವನ್ನು ತಿರುಚಿದೆ. ಬಿಜೆಪಿಯ ಹಣಬಲದ ಎದುರು ಜನಾದೇಶಕ್ಕೆ ಸೋಲಾಗಿದೆ. ಗೋವಾದಲ್ಲಿ ಕಾಂಗ್ರೆಸ್ ನಿರ್ಧಾರ ತುಂಬಾ ನಿಧಾನವಾಗಿತ್ತು ಎಂದು ಕಾಂಗ್ರೆಸ್ ಶಾಸಕ ವಿಶ್ವಜಿತ್ ರಾಣೆ ಹೇಳಿದ್ದರು. 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಸರಕಾರ ರಚಿಸಲು ವಿಫಲವಾಗಿರುವುದಕ್ಕೆ ಕಾಂಗ್ರೆಸ್ ನಾಯಕತ್ವದ ವೈಫಲ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಆದರೆ, ನಾನು ವೈಯಕ್ತಿಕವಾಗಿ ಯಾರನ್ನು ಗುರಿಮಾಡುವುದಿಲ್ಲ. ಅಲ್ಲಿ ನಮ್ಮಿಂದ ತಪ್ಪಾಗಿದೆೆ’’ ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News