ಟ್ರಂಪ್ ಪತ್ರಿಕಾ ಕಾರ್ಯದರ್ಶಿಯ ಬೆವರಿಳಿಸಿದ ಭಾರತೀಯ ಮೂಲದ ಶ್ರೀ ಚೌಹಾಣ್
ವಾಷಿಂಗ್ಟನ್,ಮಾ.14: ಇಲ್ಲಿಯ ಆ್ಯಪಲ್ ಸ್ಟೋರ್‌ವೊಂದರಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಅವರೊಂದಿಗೆ ಮುಖಾಮುಖಿಯಾದ ಭಾರತೀಯ ಮೂಲದ ಮಹಿಳೆ ಶ್ರೀ ಚೌಹಾಣ್(33) ಅವರು ಓರ್ವ ಫ್ಯಾಸಿಸ್ಟ್ ಗೋಸ್ಕರ ಕೆಲಸ ಮಾಡುತ್ತಿರುವುದು ನಿಮಗೆ ಹೇಗೆನಿಸುತ್ತದೆ ಎಂದು ಪದೇಪದೇ ಕೇಳುವ ಮೂಲಕ ಅವರ ಬೆವರಿಳಿಸಿದ್ದಾರೆ.
ತಾನು ಕೇಳಿದ್ದ ಪ್ರಶ್ನೆಗಳು ಸೇರಿದಂತೆ ಸ್ಪೈಸರ್ ಜೊತೆಗಿನ ವಾಗ್ವಾದದ ವಿವರಗಳನ್ನು ಚೌಹಾಣ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಓರ್ವ ಫ್ಯಾಸಿಸ್ಟ್‌ಗೋಸ್ಕರ ಕೆಲಸ ಮಾಡುತ್ತಿರುವುದು ನಿಮಗೆ ಹೇಗೆನಿಸುತ್ತದೆ ಮತ್ತು ದೇಶವನ್ನು ವಿನಾಶಗೊಳಿಸುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಕಟುಪ್ರಶ್ನೆಗಳನ್ನು ಚೌಹಾಣ್ ಕೇಳಿದ್ದರು.
ರಷ್ಯಾದ ಕುರಿತೂ ಸ್ಪೈಸರ್‌ಗೆ ಪ್ರಶ್ನೆಗಳನ್ನೆಸೆದಿದ್ದ ಚೌಹಾಣ್,ಡೊನಾಲ್ಡ್ ಟ್ರಂಪ್ ದೇಶದ್ರೋಹವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಚೌಹಾಣ್ ಅವರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ವೀಡಿಯೊ ವೈರಲ್ ಆಗಿದ್ದು, ಅಮೆರಿಕವು ನಿಮಗೆ ಇಲ್ಲಿ ಉಳಿಯಲು ಅವಕಾಶ ನೀಡಿರುವ ಮಹಾನ್ ದೇಶವಾಗಿದೆ ಎಂದು ಸ್ಪೈಸರ್ ಹೇಳಿರುವುದು ಅದರಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದೆ.
ಸ್ಪೈಸರ್ ಹೇಳಿಕೆ ಜನಾಂಗೀಯವಾಗಿದೆ ಎಂದು ಚೌಹಾಣ್ ಬಣ್ಣಿಸಿದ್ದಾರೆ.
ಅದೊಂದು ಜನಾಂಗೀಯ ಹೇಳಿಕೆಯಾಗಿದೆ ಮತ್ತು ಅದರಲ್ಲಿ ಬೆದರಿಕೆ ಅಡಗಿದೆ. ತಾನು ಹೇಳುವುದು ವೀಡಿಯೊದಲ್ಲಿ ದಾಖಲಾಗುತ್ತಿದೆ ಮತ್ತು ಸರಕಾರದಲ್ಲಿ ತನ್ನ ಸ್ಥಾನದ ಮಹತ್ವವೇನು ಎನ್ನುವುದು ಗೊತ್ತಿದ್ದೂ ನಗುತ್ತಲೇ ಇಂತಹ ಹೇಳಿಕೆ ನೀಡಿರುವ ಸ್ಪೈಸರ್ ಅವರ ಧೈರ್ಯದ ಬಗ್ಗೆ ಯೋಚಿಸಿ ಎಂದು ಚೌಹಾಣ್ ಹೇಳಿದ್ದಾರೆ.
ಚೌಹಾಣ್ ತನ್ನ ಐಪೋನ್ ದುರಸ್ತಿಗೆಂದು ಆ್ಯಪಲ್ ಸ್ಟೋರ್‌ನಲ್ಲಿದ್ದಾಗ ಅಲ್ಲಿ ಸ್ಪೈಸರ್ ಕಣ್ಣಿಗೆ ಬಿದ್ದಿದ್ದರು. ಯಾವುದೇ ಭದ್ರತೆಯಿಲ್ಲದೆ ಬಂದಿದ್ದ ಅವರನ್ನು ಕಂಡಾಗ ಅವರನ್ನು ಮಾತಿಗೆಳೆಯಲು ಒಳ್ಳೆಯ ಅವಕಾಶವೊಂದು ತನ್ನೆದುರಿಗಿತ್ತು. ಪ್ರಾಮಾಣಿಕ ವಾಗಿ ಹೇಳುತ್ತೇನೆ,ತನ್ನಲ್ಲಿ ಕೊಂಚ ಅಳುಕು ಮನೆಮಾಡಿತ್ತು. ಅವರಿಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೆ. ಆದರೆ ಅದಕ್ಕೆ ಸಮಯಾವಕಾಶವಿರಲಿಲ್ಲ ಎಂದು ಚೌಹಾಣ್ ಮೀಡಿಯಾ ಡಾಟ್ ಕಾಮ್‌ನಲ್ಲಿಯ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನೀವೂ ರಷ್ಯಾದ ನೆರವು ಪಡೆದಿದ್ದೀರಾ? ಅಧ್ಯಕ್ಷರಂತೆ ನೀವೂ ದೇಶದ್ರೋಹ ಮಾಡಿದ್ದೀರಾ? ರಷ್ಯಾದ ಬಗ್ಗೆ ನೀವು ನನಗೇನು ಹೇಳಬಲ್ಲಿರಿ ಮತ್ತು ನಮ್ಮ ದೇಶವನ್ನು ವಿನಾಶಗೊಳಿಸುತ್ತಿರುವ ಬಗ್ಗೆ ನಿಮಗೆ ಹೇಗೆನಿಸುತ್ತಿದೆ,ಸೀನ್ ಎಂದು ಚೌಹಾಣ್ ಪ್ರಶ್ನಿಸಿದ್ದಾರೆ.
ಕಳೆದೊಂದು ದಶಕದಿಂದ ವಾಷಿಂಗ್ಟನ್‌ನಲ್ಲಿ ವಾಸವಿರುವ ಚೌಹಾಣ್ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ವಿವಿಐಪಿಗಳನ್ನು ಭೇಟಿಯಾಗಿದ್ದರಾದರೂ ಅವರೊಂದಿಗೆ ಸಂವಾದಕ್ಕಿಳಿದಿರಲಿಲ್ಲ.
ಆದರೆ ಸ್ಪೈಸರ್ ಮತ್ತು ಅವರ ಬಾಸ್(ಟ್ರಂಪ್) ಈ ದೇಶವನ್ನು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಿದಾಗ ಅವರ ಮಟ್ಟಿಗೆ ಈ ಕಟ್ಟುಪಾಡುಗಳು ಅನ್ವಯಿಸುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಟ್ರಂಪ್ ಮತ್ತು ಅವರ ಕ್ಲು ಕ್ಲಕ್ಸ್ ಕ್ಲಾನ್ ಕಾನೂನಿನ ಆಡಳಿತ, ನಮ್ಮ ಸಂವಿಧಾನ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ರಾಜಾರೋಷವಾಗಿ ದಮನಿಸುತ್ತಿದೆ ಎಂದು ಚೌಹಾಣ್ ಬರೆದಿದ್ದಾರೆ.
ಜನರಿಗೆ ಪ್ರಶ್ನೆಗಳಿದ್ದರೆ ತನ್ನನ್ನು ಕೇಳಬಹುದಾಗಿದೆ, ಇಡೀ ದಿನ ವ್ಯಕ್ತಿಗಳಿಗೆ ಉತ್ತರಿಸುವುದರಲ್ಲೇ ತಾನು ತೊಡಗಿರುತ್ತೇನೆ. ಇದೊಂದು ಮುಕ್ತ ದೇಶವಾಗಿದ್ದು, ಜನರು ತಮಗೆ ಇಷ್ಟ ಬಂದಂತೆ ವರ್ತಿಸಬಹುದು ಎಂದು ಸ್ಪೈಸರ್ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ರಿಪಬ್ಲಿಕನ್ ಹಿಂದು ಮೈತ್ರಿಕೂಟದ ಸ್ಥಾಪಕ ಹಾಗೂ ಅಧ್ಯಕ್ಷ ಶಲಭ್ ಕುಮಾರ್ ಅವರು, ಚೌಹಾಣ್ ಅವರ ವರ್ತನೆ ಬೇಸರ ಮೂಡಿಸಿದೆ. ಆಕೆ ಪಾಕಿಸ್ತಾನವನ್ನು ಪ್ರೀತಿಸುವ ಹಿಲರಿ ಕ್ಲಿಂಟನ್‌ರನ್ನು ಇಷ್ಟ ಪಡುತ್ತಾರೆ ಎಂದು ತಾನು ಭಾವಿಸಿದ್ದೇನೆ. ಆಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದರೆ ನಮ್ಮ ದೇಶ ಎಷ್ಟೊಂದು ಮಹಾನ್ ಎನ್ನುವುದು ಆಕೆಗೆ ಅರ್ಥವಾಗುತ್ತದೆ ಎಂದು ಕುಟುಕಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಆಗಿರುವ ಕುಮಾರ್ ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ಭಾರೀ ದೇಣಿಗೆಯನ್ನು ನೀಡಿದ್ದರು.
ತನ್ನ ಪ್ರಶ್ನೆಗೆ ಸ್ಪೈಸರ್ ಉತ್ತರ ತನ್ನ ಪೌರತ್ವಕೆ ಬೆದರಿಕೆಯಾಗಿದೆ ಎಂದು ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಬರೆದುಕೊಂಡಿರುವ ಚೌಹಾಣ್, ಕ್ಯಾಮೆರಾದ ಎದುರೇ ನನ್ನ ಪೌರತ್ವಕ್ಕೆ ಬೆದರಿಕೆ ಒಡ್ಡಿರುವ ದಿಟ್ಟತನ ಇನ್ನೂ ನನ್ನಲ್ಲಿ ದಿಗ್ಭ್ರಮೆಯನ್ನು ಮೂಡಿಸಿದೆ. ನಾನು ವಿನೀತಳಾಗಿರಲಿಲ್ಲ, ಆದರೆ ನನ್ನನ್ನು ಅಮೆರಿಕದಿಂದ ಉಚ್ಚಾಟಿಸಬೇಕೆಂಬ ಅರ್ಥವೇ? ಈ ದೇಶದಲ್ಲಿಯೇ ಹುಟ್ಟಿ, ಇಲ್ಲೇ ಬೆಳೆದಿರುವ ನಾನು ದೋಷಗಳ ಹೊರತಾಗಿಯೂ ಅದನ್ನು ಅತಿಯಾಗಿ ಪ್ರೀತಿಸುತ್ತೇನೆ ಎಂದಿದ್ದಾರೆ.
ಚೌಹಾಣ್ ಗುಜರಾತ್ ಮೂಲದವರಾಗಿದ್ದು, ಪೇರೆಂಟ್ಸ್ ಇನ್ ಪಾರ್ಟನರ್‌ನ ಸಿಇಓ ಆಗಿದ್ದಾರೆ. ಫ್ಲೋರಿಡಾದಲ್ಲಿ ಜನಿಸಿದ ಅವರು ಮಿಯಾಮಿ ವಿವಿಯಿಂದ ಬಿಎಸ್ಸಿ ಮತ್ತು ಅಮೆರಿಕನ್ ವಿವಿಯಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.