×
Ad

ಕೆಸಿಎಫ್‌ನಿಂದ ಸೌದಿಯಲ್ಲಿ ಸಂಕಷ್ಟದಲ್ಲಿದ್ದ ನಾಲ್ವರು ಯುವಕರ ರಕ್ಷಣೆ

Update: 2017-03-14 15:03 IST

ಮಂಗಳೂರು, ಮಾ.14: ಸೌದಿ ಅರೇಬಿಯಾದ ಅಲ್ - ರಾಅಸ್‌ನಲ್ಲಿ ಒಂದು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರು ಹಾಗೂ ಚಿಕ್ಕಮಗಳೂರಿನ ನಾಲ್ವರು ಯುವಕರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಕ್ಷಣೆ ನೀಡಿ ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಹಕರಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಎಸ್‌ವೈಎಸ್‌ನ ಅಶ್ರಫ್ ಕಿನಾರ ಮಾತನಾಡಿ, ಕೆಲಸಕ್ಕೆಂದು ಸೌದಿ ಅರೇಬಿಯಾದ ಅಲ್ ರಾಅಸ್‌ಗೆ ತೆರಳಿದ್ದ ಮಂಗಳೂರಿನ ಹರ್ಷಿತ್, ಲತೀಶ್, ಕೋಲ್ಪೆಯ ಶರೀಫ್ ಹಾಗೂ ಚಿಕ್ಕಮಗಳೂರಿನ ಸಮನ್ ಸಾಬ್ ಎಂಬವರು ಸೌದಿ ಮಾಲಕರ ದೌರ್ಜನ್ಯದಿಂದ ಸಂಕಷ್ಟಕ್ಕೀಡಾಗಿದ್ದಾಗ ಅವರಿಗೆ ಕೆಸಿಎಫ್ ರಕ್ಷಣೆ ನೀಡಿದೆ ಎಂದರು.

ಉತ್ತಮ ವೇತನವಿದೆ ಎಂದು ಮಂಗಳೂರಿನ ಏಜೆಂಟರೊಬ್ಬರ ಮೂಲಕ ಒಂಭತ್ತು ಮಂದಿಯ ತಂಡವು ಅಲ್ಲಿ ಉದ್ಯೋಗಕ್ಕೆ ತೆರಳಿತ್ತು. ತಿಂಗಳ ಕೊನೆಯಲ್ಲಿ ವೇತನ ಕೊಡುವುದಾಗಿ ಹೇಳಿದ್ದ ಮಾಲಕ ನಾಲ್ಕೈದು ತಿಂಗಳಾದರೂ ವೇತನ ನೀಡದೆ ಸತಾಯಿಸಿದ್ದ. ಮಾತ್ರವಲ್ಲದೆ ಈ ಯುವಕರಿಗೆ ಸೌದಿಯಲ್ಲಿ ಕೆಲಸ ಮಾಡಲು ಅಗತ್ಯವಾದ ದಾಖಲೆಗಳನ್ನು ಒದಗಿಸದೆ ಪಾಸ್‌ಪೋರ್ಟ್ ಕೂಡಾ ತೆಗೆದಿರಿಸಲಾಗಿತ್ತು. ವಾಸಿಸಲು ಮನೆಯಿಲ್ಲದೆ, ತಿನ್ನಲು ಆಹಾರವಿಲ್ಲದೆ ಕೆಲ ಸಮಯ ಕಂಗಾಲಾಗಿದ್ದ ಈ ಯುವಕರ ಬಗ್ಗೆ ಕೆಸಿಎಫ್‌ನ ಮುಖವಾಣಿ ಗಲ್ಫ್ ಇಶಾರ ಮಾಸಿಕಕ್ಕೆ ಓದುಗರೊಬ್ಬರು ಮಾಹಿತಿ ನೀಡಿದ್ದರು.

ಅದರ ಆಧಾರದಲ್ಲಿ ಕೆಸಿಎಫ್ ಪದಾಧಿಕಾರಿಗಳು ಯುವಕರನ್ನು ಸಂದರ್ಶಿಸಿ ಅವರಿಗೆ ಸಮಾಧಾನ ಹೇಳಿ ತಾಯ್ನಾಡಿಗೆ ಮರಳಲು ವ್ಯವಸ್ತೆ ಮಾಡಿದರು. ಈ ನಾಲ್ವರು ಯುವಕರ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅವರಿಗೆ ಊರಿಗೆ ತೆರಳಲು ಅಗತ್ಯ ದಾಖಲೆಗಳನ್ನು ಸರಿಪಡಿಸುವವರೆಗೆ ಸುಮಾರು ಆರು ತಿಂಗಳು ಕಾಲ ಕೆಸಿಎಫ್ ಕಾರ್ಯಕರ್ತರು ಸಹಾಯ ಒದಗಿಸಿದರು ಎಂದು ಅವರು ವಿವರ ನೀಡಿದರು.

ಕೆಸಿಎಫ್‌ನ ಸಾಂತ್ವಾನ ವಿಭಾಗದ ನಾಯಕರಾದ ಸಲೀಂ ಕನ್ಯಾಡಿ, ಹಬೀಬ್ ಅಡ್ಡೂರು, ಅಲ್-ರಾಸ್ ಕೆಸಿಎಫ್‌ನ ಇಸ್ಹಾಕ್ ಬಾ ಹಸನಿ, ಫೈಝಲ್ ಮಠ, ಹೈದರ್ ಇರ್ಫಾನಿ, ಇಬ್ರಾಹೀಂ, ಬಶೀರ್ ಕಾರ್ಕಲಷ ನವ್‌ಶಾದ್ ಆತೂರು, ಸಂಶುದ್ದೀನ್, ಸಾಜಿದ್, ಅಬ್ದುಲ್ ರಹ್ಮಾನ್ ವಿಟ್ಲ, ಹಸನ್ ಮದನಿ ಮೊದಲಾದ ಸದಸ್ಯರು ನಾಲ್ವರು ಯುವಕರನ್ನು ತವರಿಗೆ ಸುರಕ್ಷಿತವಾಗಿ ತಲುಪಿಸುವಲ್ಲಿ ಸಹಕರಿಸಿದ್ದಾರೆ. ಸೌದಿ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಸ್ವದೇಶೀಕರಣ ನೀತಿ ಕಟ್ಟು ನಿಟ್ಟಾಗಿ ಜಾರಿಯಲ್ಲಿರುವುದರಿಂದ ಅನೇಕರು ಅತಂತ್ರ ವ್ಯವಸ್ಥೆಯನ್ನು ಎದುರಿಸುತ್ತಿದ್ದಾರೆ. ಹೊಸದಾಗಿ ವಿದೇಶಕ್ಕೆ ಹೋಗಲು ಬಯಸುವವರು ಏಜೆಂಟರ ಮೋಸಕ್ಕೆ ಬಲಿಯಾದಂತೆ ಎಚ್ಚರಿಕೆ ವಹಿಸಬೇಕು ಎಂದು ಅಶ್ರಫ್ ಕಿನಾರ ಹೇಳಿದರು.

ಗೋಷ್ಠಿಯಲ್ಲಿ ಸೌದಿಯಲ್ಲಿ ಸಂಕಷ್ಟದಲ್ಲಿದ್ದು ತವರಿಗೆ ಮರಳಿರುವ ಮಂಗಳೂರಿನ ಲತೀಶ್, ಕೊಲ್ಪೆಯ ಶರೀಫ್ ಮತ್ತು ಸಮನ್ ಸಾಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News