×
Ad

ಪರಮೇಶ್ವರರನ್ನು ಸಿಎಂ ಮಾಡಿದರೆ ಉಪಚುನಾವಣೆಯಲ್ಲಿ ಗೆಲುವು: ಪೂಜಾರಿ

Update: 2017-03-14 16:09 IST

ಮಂಗಳೂರು, ಮಾ.14: ಪರಮೇಶ್ವರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಲ್ಲಿ ರಾಜ್ಯದ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಅವಕಾಶವಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅಭಿಪ್ರಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿದ್ಧರಾಮಯ್ಯನವರು ಈಗಾಗಲೇ ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿದ್ದಾರೆ. 2-3 ವರ್ಷಗಳಾಯಿತು ಇನ್ನಾದರೂ ಬದಲಾಯಿಸುವ ಕೆಲಸ ನಡೆಯಬೇಕು ಎಂದವರು ಹೇಳಿದರು.

ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷ ತೊರೆಯುವುದಕ್ಕೂ ಸಿದ್ಧರಾಮಯ್ಯನವರೇ ಮೂಲ ಕಾರಣ ಎಂದು ಆರೋಪಿಸಿದ ಜನಾರ್ದನ ಪೂಜಾರಿ, ಅವರೊಬ್ಬ ಉತ್ತಮ ನಾಯಕ. ಮಾಜಿ ಮುಖ್ಯಮಂತ್ರಿ, ರಾಜ್ಯಪಾಲರಾಗಿದ್ದ ಅವರಿಗೆ ಗೌರವ ನೀಡಿ ಅವರ ಅನುಭವಿ ಎಂಬ ನೆಲೆಯಲ್ಲಿ ಅವರ ಜತೆ ಸಮಾಲೋಚನೆ ನಡೆಸುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದರೆ ಅವರು ಇಂತಹ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಕೆಲ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದಿರುವ ಪಕ್ಷಕ್ಕೆ ಆಡಳಿತ ನಡೆಸಲು ಅವಕಾಶ ನೀಡದೆ, ಆ ಪಕ್ಷಗಳನ್ನು ನಾಶ ಮಾಡಲು ಪ್ರಯತ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವದ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗೋವಾದಲ್ಲಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಬಿಜೆಪಿಯಿಂದ ಈಗಾಗಲೇ ಕಮಲ ಅಪರೇಶನ್‌ಗಾಗಿ ಕುದುರೆ ವ್ಯಾಪಾರ ಆರಂಭವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿ ಆದಾಗ ಸಾಕಷ್ಟು ಆಶಾಭಾವನೆ ಇತ್ತು. ಕೊಳೆತು ಹೋಗಿದ್ದ ರಾಜಕೀಯ ವ್ಯವಸ್ಥೆಗೆ ಹೊಸ ರೂಪು ನೀಡುವ ಭರವಸೆ ಇತ್ತು. ಆದರೆ ಪ್ರಧಾನಿ ಮೋದಿ ಈ ವಿಷಯದಲ್ಲಿ ಸೋತು ಹೋಗಿದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಪಡೆದಿರುವ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ನೀಡಬೇಕು ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಾದ ನಡೆಯುತ್ತಿದೆ. ಭಾರತದ ಪ್ರಜಾಪ್ರಭುತ್ವ ಉಳಿಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಬಹುಮತ ಪಡೆದ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ನೀಡುವ ಭರವಸೆ ಇದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ಇತಿಶ್ರೀ ಆಗಲಿದೆ ಎಂದರು.

ನೋಟು ಅಮಾನ್ಯದ ಮೂಲಕ ಈಗಾಗಲೇ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕೂಡ ಕಡಿಮೆಯಾಗಿದೆ. ದೇಶಕ್ಕೆ ಬಾಂಗ್ಲಾ ದೇಶದಿಂದ ಕಳ್ಳ ನೋಟು ಹರಿದು ಬರುತ್ತಿದೆ. ಸ್ವಿಸ್ ಬ್ಯಾಂಕ್‌ನಿಂದ ಒಂದು ಪೈಸೆ ತರಲೂ ಪ್ರಧಾನಿಯಿಂದ ಆಗಿಲ್ಲ. ಈಗ ಬ್ಯಾಂಕ್‌ನಲ್ಲಿ ನಗದು ಮಿತಿಯನ್ನು ತೆಗೆಯುವ ಮೂಲಕ ನೀವು ಸಂಪೂರ್ಣವಾಗಿ ಸೋತಿರುವುದು ಸಾಬೀತಾಗಿದೆ. ಬದಲಾವಣೆಯ ಆಸೆ ತೋರಿಸಿ ಅವರ ಭಾಷಣ ಕೇಳಿ ಜನ ಮರುಳಾಗಿದ್ದರು. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಅಧಿಕಾರ ಪಡೆಯುವುದಿಲ್ಲ ಎಂದು ಪೂಜಾರಿ ನುಡಿದರು.

ರಾಹುಲ್‌ರಿಂದ ಮೋದಿಗಿಂತಲೂ ಸಮರ್ಥ ಆಡಳಿತ ಮೋದಿಯ ಭಾಷಣದ ಮೋಡಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ. ಆದರೆ ಪಕ್ಷ ಇನ್ನೂ ಜೀವಂತವಾಗಿದೆ. ಮುಂದೆ ಉತ್ತಮ ನಾಯಕನಾಗಲು ಪಕ್ಷದ ರಾಹುಲ್ ಗಾಂಧಿಯವರೂ ತಯಾರಾಗುತ್ತಿದ್ದಾರೆ. ಅವರು ಪ್ರಧಾನಿ ಅಥವಾ ಮುಖ್ಯಮಂತ್ರಿಯಾದಲ್ಲಿ ಮೋದಿಗಿಂತಲೂ ಅತ್ಯುತ್ತಮ ಆಡಳಿತ ನೀಡಬಲ್ಲರು ಎಂದು ಪೂಜಾರಿ ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಮೇಯರ್ ಅಜಿತ್ ಕುಮಾರ್, ಕಳ್ಳಿಗೆ ತಾರನಾಥ ಶೆಟ್ಟಿ, ಯು. ಕರುಣಾಕ ಶೆಟ್ಟಿ, ಉಮೇಶ್ ಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News