×
Ad

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಮುಂದುವರಿಕೆ : ಆಹಿರ್

Update: 2017-03-14 17:56 IST

ಹೊಸದಿಲ್ಲಿ,ಮಾ.14: ಕದನ ವಿರಾಮ ಒಪ್ಪಂದದ ಉಲ್ಲಂಘನೆಯನ್ನು ಪಾಕಿಸ್ತಾನವು ಮುಂದುವರಿಸಿದೆ ಮತ್ತು ಗಡಿಯಾಚೆಯಿಂದ ಗುಂಡು ಹಾರಾಟ,ವಿಧ್ವಂಸಕ ಕೃತ್ಯಗಳು ಮತ್ತು ಭಾರತದಲ್ಲಿ ನುಸುಳುವಿಕೆಯನ್ನು ಪಾಕಿಸ್ತಾನದಲ್ಲಿನ ‘ಅಧಿಕೃತ ಮೂಲಗಳು’ ಈಗಲೂ ಬೆಂಬಲಿಸುತ್ತಿವೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಆಹಿರ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.

ಅಪ್ರಚೋದಿತ ಗುಂಡು ಹಾರಾಟ ಮತ್ತು ಕದನ ವಿರಾಮ ಉಲ್ಲಂಘನೆಗಳ ಸಂದರ್ಭ ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ತಕ್ಷಣವೇ ಪರಿಣಾಮಕಾರಿ ಪ್ರತಿದಾಳಿಗಳನ್ನು ನಡೆಸುತ್ತಿವೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.

2016ರಲ್ಲಿ ನಿಯಂತ್ರಣ ರೇಖೆಯಲ್ಲಿ 228 ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ 221 ಕದನ ವಿರಾಮ ಉಲ್ಲಂಘನೆ ಘಟನೆಗಳು ನಡೆದಿದ್ದು, ಇವುಗಳಲ್ಲಿ 13 ನಾಗರಿಕರು ಕೊಲ್ಲಲ್ಪಟ್ಟು, ಇತರ 83 ಜನರು ಗಾಯಗೊಂಡಿದ್ದಾರೆ ಮತ್ತು ಐವರು ಸೇನಾ ಸಿಬ್ಬಂದಿಗಳು ಕೊಲ್ಲಲ್ಪಟ್ಟು ಇತರ 74 ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಈ ಘಟನೆಗಳಲ್ಲಿ ಐವರು ಬಿಎಸ್‌ಎಫ್ ಯೋಧರೂ ಕೊಲ್ಲಲ್ಪಟ್ಟಿದ್ದು, ಇತರ 25 ಜನರು ಗಾಯಗೊಂಡಿದ್ದಾರೆ.

2017ರಲ್ಲಿ ಫೆಬ್ರವರಿಯವರೆಗೆ ನಿಯಂತ್ರಣ ರೇಖೆಯಲ್ಲಿ 22 ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಆರು ಕದನವಿರಾಮ ಉಲ್ಲಂಘನೆ ಘಟನೆಗಳು ನಡೆದಿವೆ ಎಂದು ಸಚಿವರು ತಿಳಿಸಿದರು.

ಪಾಕಿಸ್ತಾನವು ನಿಯಂತ್ರಣ ರೇಖೆಯನ್ನು ಗೌರವಿಸಬೇಕಾದ ಮತ್ತು ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರಬೇಕಾದ ಅಗತ್ಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಅದಕ್ಕೆ ತಿಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News