ಪ್ರವಾಸೋದ್ಯಮಕ್ಕೆ ಒತ್ತು ನೀಡಲು ‘ಪ್ರವಾಸಿ ಕರ್ನಾಟಕ ದಿವಸ್’ ಆಚರಣೆ: ಡಾ. ಆರತಿ ಕೃಷ್ಣ
ಮಂಗಳೂರು, ಮಾ.14: ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಕೇಂದ್ರ ಅನಿವಾಸಿ ಭಾರತಿ ಸಮಿತಿಯು ‘ಪ್ರವಾಸಿ ಭಾರತಿ ದಿವಸ್’ ಆಚರಿಸಿದಂತೆ ಕರ್ನಾಟಕದಲ್ಲೂ ‘ಪ್ರವಾಸಿ ಕರ್ನಾಟಕ ದಿವಸ್’ ಆಚರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸಿ ಭಾರತಿ ದಿವಸ್ 2 ವರ್ಷಕ್ಕೊಮ್ಮೆ ನಡೆಯುತ್ತಿದೆ. ಬಿಡುವಿನ ವರ್ಷದ ಜನವರಿಯಲ್ಲಿ ‘ಪ್ರವಾಸಿ ಕರ್ನಾಟಕ ದಿವಸ್’ ಆಚರಿಸಲಾಗುವುದು. ಇದರಿಂದ ನಿರಂತರವಾಗಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಂಡಂತಾಗುತ್ತದೆ. ಈ ಕಾರ್ಯಕ್ರಮದಲ್ಲಿ ಎನ್‌ಆರ್‌ಐಗಳ ಸಮ್ಮಿಲನ, ಪರಸ್ಪರ ಚರ್ಚೆ, ಸಂವಾದ, ವಿಚಾರ ಸಂಕಿರಣ ನಡೆಸಲಾಗುತ್ತದೆ ಎಂದರು.
ವಿದೇಶಕ್ಕೆ ಹೋಗುವ ಮುನ್ನ ಮಾಹಿತಿ ಶಿಬಿರ: ವಿದೇಶಕ್ಕೆ ಹೋಗುವ ಸಂದರ್ಭ ಹಲವರು ತಮಗೆ ಅರಿವಿಲ್ಲದಂತೆ ತಪ್ಪು ಎಸಗಿ ಜೈಲು ಪಾಲಾಗುತ್ತಿದ್ದಾರೆ. ಇದರಿಂದ ಅದೆಷ್ಟೋ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಆ ಹಿನ್ನೆಲೆಯಲ್ಲಿ ವಿದೇಶಕ್ಕೆ ಕೆಲಸ ಅರಸಿ ಹೋಗುವವರು ಯಾವ ಯಾವ ವಸ್ತುಗಳನ್ನು ಕೊಂಡು ಹೋಗಬಹುದು, ಹೋಗಬಾರದು ಎಂಬ ವಿಷಯದ ಬಗ್ಗೆ ಮಾಹಿತಿ ಶಿಬಿರ ನಡೆಸಲಾಗುವುದು. ಇದರಿಂದ ಅರಿವಿಲ್ಲದೆ ಅಥವಾ ಯಾರದೋ ಕುತಂತ್ರಕ್ಕೆ ಒಳಗಾಗಿ ಜೈಲು ಪಾಲಾಗುವುದನ್ನು ತಪ್ಪಿಸಬಹುದು ಎಂದು ಡಾ. ಆರತಿ ಕೃಷ್ಣ ತಿಳಿಸಿದರು.
ನಮ್ಮ ಊರು-ನಮ್ಮ ನಾಡು: ಅನೇಕ ಅನಿವಾಸಿ ಭಾರತೀಯ ಕನ್ನಡಿಗರಲ್ಲಿ ಹೊಸ ಹೊಸ ಯೋಜನೆ, ಕಲ್ಪನೆಗಳಿವೆ. ಅದನ್ನು ಸಾಕಾರಗೊಳಿಸಲು ‘ನಮ್ಮ ಊರು-ನಮ್ಮ ನಾಡು’ ಎಂಬ ಪರಿಕಲ್ಪನೆಯೊಂದಿಗೆ ಒಂದು ಊರು ಅಥವಾ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿನ ಧಾರ್ಮಿಕ ಕೇಂದ್ರಗಳು, ಶಾಲೆ, ಆಸ್ಪತ್ರೆ ಮತ್ತಿತರ ಸಾರ್ವಜನಿಕರು ಉಪಯೋಗಿಸುವ ಕೇಂದ್ರಗಳ ಅಭಿವೃದ್ಧಿಗಾಗಿ ಅನಿವಾಸಿ ಭಾರತೀಯ ಕನ್ನಡಿಗರಿಗೆ ಸಲಹೆ-ಸಹಕಾರ ನೀಡಲಾಗುವುದು. ಆ ಮೂಲಕ ಊರ ಅಭಿವೃದ್ಧಿಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಮದುವೆ- ಶೈಕ್ಷಣಿಕ ಪ್ರಮಾಣಪತ್ರ ದೃಢೀಕರಣ: ಹೆಚ್ಚಿನ ಅನಿವಾಸಿ ಭಾರತೀಯ ಕನ್ನಡಿಗರು ಶೈಕ್ಷಣಿಕ ಮತ್ತು ಮದುವೆಯ ಪ್ರಮಾಣಪತ್ರ ಪಡೆಯಲು ಪರದಾಡುತ್ತಿದ್ದಾರೆ. ಅವುಗಳ ದೃಢೀಕರಣಕ್ಕೆ ಕರ್ನಾಟಕದಲ್ಲಿ ನಾಲ್ಕು ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಹಲವರಿಗೆ ತೊಂದರೆಯಾಗಲಿದ್ದು, ಅದನ್ನು ತಪ್ಪಿಸಲು ಸಮಿತಿಯು ಒಂದೇ ಕಡೆ ಈ ವ್ಯವಸ್ಥೆ ಕಲ್ಪಿಸಲು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಆರತಿ ಕೃಷ್ಣ ನುಡಿದರು.
ಉದ್ಯೋಗ ನೇಮಕಾತಿ ಸಂಸ್ಥೆ: ರಾಜ್ಯದ ಹಲವು ಕಡೆ ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಯಿದೆ. ಆ ಮೂಲಕ ವಿದೇಶಕ್ಕೆ ತೆರಳಿದ ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ನೂರಾರು ಮಂದಿ ವಂಚನೆಗೀಡಾಗಿದ್ದಾರೆ. ಈ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ನಿಗಾ ಇಡುವುದಕ್ಕಾಗಿ ಸಮಿತಿ ಕ್ರಮ ಕೈಗೊಳ್ಳಲಾಗುವುದು ಎಂದು ಆರತಿ ಕೃಷ್ಣ ಹೇಳಿದರು.
ಕನ್ನಡಿಗರ ಸಂಘಟನೆಗಳ ಒಕ್ಕೂಟ: ವಿದೇಶದಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡಿಗರು ವಿವಿಧ ಜಾತಿ, ಭಾಷೆ, ಧರ್ಮ, ಸಾಹಿತ್ಯ ಇತ್ಯಾದಿಯ ಹೆಸರಿನಲ್ಲಿ ಸಂಘಟನೆಗಳನ್ನು ಸ್ಥಾಪಿಸಿದ್ದಾರೆ. ಇವೆಲ್ಲವುಗಳ ‘ಒಕ್ಕೂಟ’ ರಚಿಸಿ ಅದಕ್ಕೆ ರಾಜ್ಯ ಸರಕಾರದಿಂದ ಮಾನ್ಯತೆ ನೀಡಿ ಅನಿವಾರ್ಯ ಸಂದರ್ಭ ರಾಯಭಾರಿ ಕಚೇರಿಗಳಲ್ಲಿ ಅನ್ಯಾಯಕ್ಕೊಳಗಾದ ಕನ್ನಡಿಗರ ಪರವಾಗಿ ಧ್ವನಿ ಎತ್ತಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಹೆಚ್ಚುವರಿ ಎಸ್ಪಿ ಡಾ. ವೇದಮೂರ್ತಿ ಉಪಸ್ಥಿತರಿದ್ದರು.
ಅಹವಾಲು ಸಲ್ಲಿಕೆ
ಸುದ್ದಿಗೋಷ್ಠಿಗೆ ಮುನ್ನ ಡಾ. ಆರತಿ ಕೃಷ್ಣ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಕಾರ್ಕಳದ ಯುವತಿಯೊಬ್ಬಳು ತನ್ನ ತಾಯಿ ಏಜೆಂಟರ ಮಾತನ್ನು ನಂಬಿ ಗಲ್ಫ್‌ಗೆ ಹೋದರೂ ಅಲ್ಲಿಂದ ಬರಲಾಗದೆ ತೊಂದರೆಗೊಳಗಾಗಿದ್ದಾರೆ ಎಂದು ಹೇಳಿಕೊಂಡರೆ, ತೊಕ್ಕೊಟ್ಟಿನ ಯುವಕನೊಬ್ಬ ತನ್ನ ಅಣ್ಣ ಕಳೆದ 4 ತಿಂಗಳಿನಿಂದ ದುಬೈಯ ಜೈಲು ಸೇರಿರುವ ಬಗ್ಗೆ ವಿವರಿಸಿದರು.
ಪರಿಚಯದ ವ್ಯಕ್ತಿಯೊಬ್ಬರ ಮಾತು ಕೇಳಿ ಮಂಗಳೂರಿನಿಂದ ರವಾನಿಸಲ್ಪಟ್ಟ ಪಾರ್ಸೆಲ್ ಪಡೆಯಲು ಹೋದ ಸಂದರ್ಭ ಅಲ್ಲಿನ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆ ಪೈಕಿ ಒಬ್ಬಾತ ದಂಡ ಕಟ್ಟಿ ಹೊರ ಬಂದಿದ್ದರೆ, ತನ್ನ ಅಣ್ಣ ಇನ್ನೂ ಅಲ್ಲೇ ಇದ್ದಾರೆ. ಇದರ ಸೂತ್ರಧಾರಿ ದುಬೈಯಿಂದ ಮಂಗಳೂರಿಗೆ ಬಂದು ರಾರಾಜಿಸುತ್ತಿದ್ದಾರೆ. ಏನೂ ಮಾಡದ ಅಣ್ಣ ಜೈಲು ಸೇರಿದ್ದು, ನಾವೆಲ್ಲ ಚಿಂತಾಕ್ರಾಂತರಾಗಿದ್ದೇವೆ ಎಂದು ತೊಕ್ಕೊಟ್ಟಿನ ಯುವಕ ಹೇಳಿಕೊಂಡರು.
ಕುಟುಂಬಸ್ಥರು ಸಲ್ಲಿಸಿದ ಈ ಅಹವಾಲನ್ನು ಆಲಿಸಿದ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಸೂಕ್ತ ಕ್ರಮದ ಭರವಸೆ ನೀಡಿದರು.