×
Ad

ಪೆರ್ಲಾಜೆ ಸರಕಾರಿ ಶಾಲೆಗೆ ‘ಪರಿಸರ ಮಿತ್ರ’ ಪ್ರಶಸ್ತಿ ಪ್ರದಾನ

Update: 2017-03-14 18:56 IST

ಉಡುಪಿ, ಮಾ.14 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವ ಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಘಟಕದ ಸಹಯೋಗದಲ್ಲಿ ಕಾರ್ಕಳ ಪೆರ್ಲಾಜೆಯ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಡಶಾಲೆಗೆ 30,000ರೂ. ನಗದಿನೊಂದಿಗೆ ‘ಜಿಲ್ಲಾ ಪರಿಸರ ಮಿತ್ರ’ ಶಾಲೆ ಪ್ರಥಮ ಪ್ರಶಸ್ತಿಯನ್ನು ಮಂಗಳವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

  ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಟಿ.ವೆಂಕಟೇಶ್ ನಾಯ್ಕಾ ಮಾತನಾಡಿ, ಇತ್ತೀಚೆಗೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ನಮ್ಮ ಸುತ್ತಲಿನ ಪರಿಸರದ ಸರಿಯಾದ ನಿರ್ವಹಣೆ, ನೈರ್ಮಲ್ಯ ಕಾಪಾಡಿ ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ನಾಗರಿಕರು ಸಂವಿಧಾನ ತಮಗೆ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡದೇ, ಕರ್ತವ್ಯಗಳನ್ನೂ ಸಹ ನಿರ್ವಹಿಸಬೇಕು ಎಂದರು.

ಸ್ವಚ್ಛತೆಯಿದ್ದಲ್ಲಿ ಶಿಸ್ತು ಮತ್ತು ಆರೋಗ್ಯ ಇರುತ್ತದೆ. ಇದರಿಂದ ಆರೋಗ್ಯ ಯುತ ಸಮಾಜ ಹಾಗೂ ದೇಶ ನಿರ್ಮಾಣ ಸಾಧ್ಯ. ಮಕ್ಕಳಲ್ಲಿ ಶಾಲಾ ಹಂತದಲ್ಲಿಯೇ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

 ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿಗಾಗಿ ಜಿಲ್ಲೆಯ 307 ಶಾಲೆಗಳು ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆ ನಂತರ 33 ಶಾಲೆಗಳನ್ನು ಆಯ್ಕೆ ಮಾಡ ಲಾಗಿತ್ತು. 45 ದಿನಗಳ ಅಂತರದಲ್ಲಿ ಶಾಲೆಗಳಿಗೆ ಖುದ್ದು ಭೇಟಿ ನೀಡಿ, ಪ್ರಶಸ್ತಿ ಆಯ್ಕೆಗೆ ನಿಗದಿಪಡಿಸಿದ್ದ ವಿವಿಧ ಮಾನದಂಡಗಳ ಪ್ರಕಾರ ಅಂತಿಮ ವಾಗಿ 21 ಶಾಲೆಗಳನ್ನು ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಅರವಿಂದ ಹೆಬ್ಬಾರ್ ಮಾಹಿತಿ ನೀಡಿದರು.

 ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಮೂಲ ಭೂತ ಕರ್ತವ್ಯಗಳು ಮತ್ತು ಪರಿಸರ ಕುರಿತು ನ್ಯಾಯವಾದಿ ಹಮ್ಜತ್ ಎಚ್.ಕೆ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧ, ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ಪರಿಷತ್ತ್‌ನ ಉಡುಪಿ ಘಟಕದ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಹೆಚ್.ಲಕ್ಷ್ಮಿಕಾಂತ ಸ್ವಾಗತಿಸಿದರು. ರಾಜೇಂದ್ರ ಬೆಳ್ಮಣ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News