ಕಟ್ಟಡ ಕಾರ್ಮಿಕರ ಅರ್ಜಿಗಳಿಗೆ ಸ್ಪಂದಿಸದ ಕ್ರಮ ವಿರೋಧಿಸಿ ಧರಣಿ

Update: 2017-03-14 13:28 GMT

ಉಡುಪಿ, ಮಾ.14: ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳು ಕಳೆದ ಮೂರು ವರ್ಷಗಳಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಸಹಾಯಧನ ಮಂಜೂರು ಮಾಡದಿರುವ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ(ಸಿಐಟಿಯು) ನೇತೃತ್ವದಲ್ಲಿ ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಲಾಯಿತು.

2013-14-15ನೇ ಸಾಲಿನ ಉಳಿದ ಸೌಲಭ್ಯಗಳ ಮಂಜೂರಾಗದ ಅರ್ಜಿ ಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಹಾಗೂ ಕಾರ್ಮಿಕ ಅಧಿಕಾರಿಯವರ ಜಂಟಿ ಸಭೆ ನಡೆಸಬೇಕು. ವೈದ್ಯಕೀಯ ಅಂತಿಮ ಸಂಸ್ಕಾರದ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಬೇಕು. ಸಹಾಯಧನವನ್ನು ಒಂದು ತಿಂಗಳೊಳಗೆ ಮಂಜೂರು ಮಾಡುವಂತೆ ಕ್ರಮ ವಹಿಸಬೇಕು.

ವಿದ್ಯಾರ್ಥಿ ವೇತನವನ್ನು ನೆಫ್ಟ್ ಮೂಲಕ ಜಮಾ ಮಾಡಿದ ನಂತರ ಕಾರ್ಮಿಕರ ಖಾತೆಗೆ ಜಮಾ ಆಗದವರ ಕುರಿತು ತಕ್ಷಣವೇ ಪರಿಶೀಲನೆ ನಡೆಸಿ ಪರಿಹರಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಕುಂದು ಕೊರತೆಗಳ ಸಭೆಯನ್ನು ಕರೆಯಬೇಕು. ಕಟ್ಟಡ ಕಾರ್ಮಿಕರ ಕೆಲಸಗಳು ಶೀಘ್ರ ನಡೆಯಲು ಸಿಬ್ಬಂದಿ ನೇಮಕಾತಿ ಮಾಡಬೇಕು. 2015ರಲ್ಲಿ ಸಂಘವು ಇಲಾಖೆಗೆ ಸಲ್ಲಿಸಿದ ಪ್ರೋತ್ಸಾಹಧನ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಧರಣಿ ನಿರತರಿಂದ ಮನವಿಯನ್ನು ಸ್ವೀಕರಿಸಿ, ಶೀಘ್ರದಲ್ಲೇ ಕಟ್ಟಡ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಜಂಟಿ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಇವರೊಂದಿಗೆ ಕಾರ್ಮಿಕ ಅಧಿಕಾರಿಗಳು ಕೂಡ ಹಾಜರಿದ್ದರು.

ಧರಣಿಯಲ್ಲಿ ಸಮಿತಿಯ ಮುಖಂಡರಾದ ಯು.ದಾಸ ಭಂಡಾರಿ, ಶೇಖರ ಬಂಗೇರ, ಸುರೇಶ್ ಕಲ್ಲಾಗರ, ವಿಠಲ ಪೂಜಾರಿ, ವಿಶ್ವನಾಥ ರೈ, ವೆಂಕಟೇಶ್ ಕೋಣಿ, ರಾಜು ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು.

‘ನೋಂದಾಯಿತ ಕಟ್ಟಡ ಕಾರ್ಮಿಕರಾಗಿದ್ದ ನನ್ನ ಪತಿ ಹೆಮ್ಮಾಡಿ ವೆಂಕಟೇಶ್ ಮೂರು ವರ್ಷಗಳ ಹಿಂದೆ ಆಕಸ್ಮಿಕವಾಗಿ ಮೃತಪಟ್ಟಿದ್ದು, ಅವರ ಮೃತಪಟ್ಟ 15 ದಿನಗಳಲ್ಲಿ ಪರಿಹಾರಕ್ಕಾಗಿ ಮಂಗಳೂರಿನ ಕಾರ್ಮಿಕ ಆಯುಕ್ತ ಕಚೇರಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಅರ್ಜಿ ಸಲ್ಲಿಸಿ ಮೂರು ವರ್ಷಗಳಾದರೂ ನಯಾ ಪೈಸೆ ಬಂದಿಲ್ಲ. ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಇದೀಗ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದೇನೆ’ ಎಂದು ಪ್ರಭಾವತಿ ತಮ್ಮ ನೋವನ್ನು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News