ಕೊಲ್ಯ: ಟ್ಯಾಂಕರ್‌ಗೆ ಪಿಕ್‌ಅಪ್ ವಾಹನ ಢಿಕ್ಕಿ; ಇಬ್ಬರಿಗೆ ಗಾಯ

Update: 2017-03-14 13:52 GMT

ಉಳ್ಳಾಲ,ಮಾ.14: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ ಅಡ್ಕದಲ್ಲಿ ನೀರಿನ ಟ್ಯಾಂಕರ್‌ವೊಂದಕ್ಕೆ ಹಿಂಬಂದಿಯಿಂದ ಬಂದ ಪಿಕ್‌ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮ ಪಿಕ್‌ಅಪ್ ಚಾಲಕ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಪಿಕ್‌ಅಪ್ ಚಾಲಕ ಕೊಪ್ಪಳ ಜಿಲ್ಲೆಯ ಮಣಿಗೇರಿ ಗ್ರಾಮದ ನಿವಾಸಿ ಹನುಮಂತಪ್ಪ(38) ಮತ್ತು ಸಹಸವಾರ ಕೋಟೆಕಾರು ನಿವಾಸಿ ಸಂದೀಪ್(40)ಗಂಭೀರ ಗಾಯಗೊಂಡವರಾಗಿದ್ದಾರೆ. ಕೊಲ್ಯ ಅಡ್ಕದ ಹೆದ್ದಾರಿ ವಿಭಜಕದಲ್ಲಿ ಬೆಳೆಸಲಾದ ಸಸ್ಯಗಳಿಗೆ ಹೆದ್ದಾರಿಯಲ್ಲೇ ನಿಲ್ಲಿಸಿ ನೀರು ಹಾಯಿಸುತ್ತಿದ್ದ ನೀರಿನ ಟ್ಯಾಂಕರ್ ಅಳವಡಿಸಿದ ಟ್ರ್ಯಾಕ್ಟರ್‌ಗೆ ಶಾಮಿಯಾನದ ಸಾಮಾಗ್ರಿಗಳನ್ನು ಹೊತ್ತು ಕೋಟೆಕಾರಿನ ಕಡೆ ತೆರಳುತ್ತಿದ್ದ ಪಿಕ್‌ಅಪ್ ವಾಹನವು ನಿಯಂತ್ರಣ ತಪ್ಪಿ ಹಿಂಬದಿಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಪಿಕ್‌ಅಪ್ ವಾಹನದ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಶಾಮಿಯಾನಕ್ಕೆ ಬಳಸುವ ಕಬ್ಬಿಣದ ಸಲಾಕೆಯು ತುಂಡಾಗಿ ಪಿಕ್‌ಅಪ್ ವಾಹನದ ಸಹಸವಾರನ ಕತ್ತಿನೊಳಗೆ ನುಸುಳಿದ್ದು, ಚಾಲಕನಿಗೂ ಗಂಭೀರ ಗಾಯಗಳಾಗಿದೆ. ಗಂಭೀರ ಗಾಯಗೊಂಡ ಪಿಕ್‌ಅಪ್ ಚಾಲಕ ಮತ್ತು ಸಹಸವಾರನನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News