ಮಂಗಳೂರಿನಲ್ಲಿ ತಕ್ಷಣ 33 ಕೊಳವೆ ಬಾವಿ ಕೊರೆಯಲು ಶಾಸಕ ಜೆ.ಆರ್.ಲೋಬೊ ಸೂಚನೆ

Update: 2017-03-14 13:59 GMT

ಮಂಗಳೂರು, ಮಾ.15: ನಗರದಲ್ಲಿ ಕುಡಿಯುವ ನೀರು ಒದಗಿಸಲು ತಕ್ಷಣಕ್ಕೆ 33 ಬೋರ್‌ವೆಲ್‌ಗಳನ್ನು ಕೊರೆಯಲು ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚಿಸಿದರು.

ಕದ್ರಿಯಲ್ಲಿರುವ ತನ್ನ ಕಚೇರಿಯಲ್ಲಿ ಮಂಗಳವಾರ ನಡೆದ ನೀರಿನ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ತುಂಬೆಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದ್ದು ಪರ್ಯಾಯ ವ್ಯವಸ್ಥೆಯನ್ನು ಮಾಡಲು ತಕ್ಷಣ ಬೋರ್‌ವೆಲ್‌ಗಳನ್ನು ಕೊರೆಸಲು ತಿಳಿಸಿದರಲ್ಲದೆ, ಈ ಬೋರ್‌ವೆಲ್ ಕೊರೆದು ತುಂಬೆಯ ನೀರಿನ ಬದಲು ಈ ನೀರನ್ನು ಲಿಂಕ್ ಮಾಡುವಂತೆ ಸೂಚಿಸಿದರು.

ಈ ಕೆಲಸವು ಯುದ್ಧೋಪಾದಿಯಲ್ಲಿ ನಡೆಯಬೇಕು. ಈಗ ಇರುವ ಎಲ್ಲ ವಾಲ್‌ಮ್ಯಾನ್‌ಗಳ ಸಭೆ ಕರೆದು ಈಗಿನಿಂದಲೇ ತುಂಬೆಯ ನೀರಿನ ಬದಲು ಕೊಳವೆ ಬಾವಿಗಳನ್ನು ಆಪರೇಟ್ ಮಾಡುವಂತೆ ಸೂಚಿಸಿದರು.

ಎಲ್ಲೆಲ್ಲಿ ತೆರೆದ ಬಾವಿಗಳಿವೆಯೋ ಅವುಗಳ ನೀರನ್ನು ಬಳಸಿಕೊಳ್ಳಲು ಪ್ರಯತ್ನಿಸಬೇಕು. ಕೊಳವೆ ಬಾವಿಯ ನೀರನ್ನು ಎಲ್ಲಿಗೆ ಲಿಂಕ್ ಮಾಡಿದರೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿದು ಕೊಳ್ಳಿ. ನಂತರ ಕೊಳವೆ ಬಾವಿ, ತೆರೆದ ಬಾವಿಯ ನೀರನ್ನು ಬಳಸಿಕೊಳ್ಳಲು ಪ್ರಯತ್ನಿಸುವಂತೆ ಲೋಬೊ ತಿಳಿಸಿದರು.

ನಗರದಲ್ಲಿ 133 ಕೊಳವೆ ಬಾವಿಗಳು ಸಮರ್ಪಕವಾಗಿದ್ದು, 85 ಕೊಳವೆ ಬಾವಿಗಳು ಕೆಟ್ಟು ಹೋಗಿವೆ. ಸರಿಯಾಗಿರುವ ಕೊಳವೆ ಬಾವಿಗಳ ನೀರನ್ನು ಎಲ್ಲಿಗೆ ಲಿಂಕ್ ಮಾಡಬಹುದು, ಹಾಗೆ ಮಾಡಿದರೆ ಎಷ್ಟು ಜನರಿಗೆ ನೀರು ಕೊಡಲು ಸಾಧ್ಯವಿದೆ ಎಂಬ ಬಗ್ಗೆ ಕೂಲಂಕಷ ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News