×
Ad

ಗೋವು ಕಳ್ಳರನ್ನು ಮಟ್ಟ ಹಾಕಲು ಜಿಲ್ಲಾಡಳಿತಕ್ಕೆ ಕೃಷಿಕ ಸಂಘ ಆಗ್ರಹ

Update: 2017-03-14 20:14 IST

ಉಡುಪಿ, ಮಾ.14: ಜಿಲ್ಲೆಯಲ್ಲಿ ಕೃಷಿಕರು ಹಲವು ಸಮಸ್ಯೆಗಳನ್ನು ಎದುರಿಸುತಿದ್ದು, ಕೃಷಿ ಮತ್ತು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಗೋವು ಕಳ್ಳರ ಕಾಟ ಹೈನುಗಾರಿಕೆಯನ್ನು ಬದುಕಾಗಿಸಿ ಕೊಂಡ ಕೃಷಿಕರಿಗೆ ಬಹುದೊಡ್ಡ ಹೊಡೆತವಾಗುತ್ತಿದೆ. ಜಿಲ್ಲಾಡಳಿತವು ಈ ಬಗ್ಗೆ ಕಠಿಣ ಕ್ರಮಕೈಗೊಂಡು ಗೋವುಕಳ್ಳರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು ಎಂದು ಜಿಲ್ಲಾ ಕೃಷಿಕ ಸಂಘವು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದೆ.

 ಕಾಪು ಹೋಬಳಿಯ ಕಳತ್ತೂರು ಗ್ರಾಮದ ಕೃಷಿಕ ಎಡ್ವರ್ಡ್ ಮೆಂಡೋನ್ಸಾ ಅವರ ಹಾಲು ಕೊಡುವ ಎರಡು ಜರ್ಸಿ ದನಗಳನ್ನು ಕೊಟ್ಟಿಗೆಯಿಂದ ಮಾ. 9ರ ರಾತ್ರಿ ಕದ್ದೊಯ್ಯಲಾಗಿದೆ. ಈ ರೀತಿ ದನಕರುಗಳನ್ನು ಕದ್ದೊಯ್ಯುವ ದನಗಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು. ಕಳ್ಳತನ ಮಾಡಲ್ಪಟ್ಟ ರಾಸುಗಳ ಮಾಲೀಕ-ಕೃಷಿಕರಿಗೆ 4-5 ಪಟ್ಟು ಹೆಚ್ಚು ಪರಿಹಾರ ಆ ಕಳ್ಳರಿಂದಲೇ ವಸೂಲಿ ಮಾಡಿಕೊಡಬೇಕು ಎಂದು ಸಂಘ ಆಗ್ರಹಿಸಿದೆ.

ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಲ್ಲಿ ಪೋಲಿಸ್ ಗಸ್ತು ಹೆಚ್ಚಿಸಬೇಕು ಮತ್ತು ಚೆಕ್ ಪೋಸ್ಟ್‌ಗಳ ಸ್ಥಾಪನೆ ಮಾಡಬೇಕು. ಕಳ್ಳರು ಪತ್ತೆಯಾಗುವರೆಗೆ ರಾಸುಗಳನ್ನು ಕಳೆದುಕೊಂಡು ಕಂಗೆಟ್ಟ ಕೃಷಿಕರಿಗೆ ಅವುಗಳ ಮಾರುಕಟ್ಟೆ ದರವನ್ನು ಸರಕಾರ ಪರಿಹಾರವಾಗಿ ನೀಡಬೇಕು. ಈಪರಿಹಾರವನ್ನು ಕೃಷಿಕ ಎಡ್ವರ್ಡ್ ಮೆಂಡೋನ್ಸಾ ಅವರಿಗೆ ನೀಡುವ ಮೂಲಕವೇ ಆರಂಭಿಸಬೇಕು. ಇದಲ್ಲದೇ ಕೃಷಿ ಯಂತ್ರೋ ಪಕರಣ, ಪಂಪುಸೆಟ್, ಅಡಿಕೆ-ತೆಂಗು ಇತ್ಯಾದಿ ಕೃಷಿಉತ್ಪನ್ನಗಳ ಕಳ್ಳತನವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News