×
Ad

‘ವಿಕಲಚೇತನ ನೌಕರರ ಬಡ್ತಿ ಮಿಸಲಾತಿ ಆದೇಶ ಜಾರಿಗೊಳಿಸಿ’ : ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ

Update: 2017-03-14 21:17 IST

ಉಡುಪಿ, ಮಾ.14: ಸರಕಾರಿ ವಿಕಲಚೇತನ ನೌಕರರಿಗೆ ಸುಪ್ರೀಂ ಕೋರ್ಟ್‌ನ ಆದೇಶದಂತೆ ಶೇ.3ರಷ್ಟು ಬಡ್ತಿ ಮಿಸಲಾತಿ ಆದೇಶವನ್ನು ಶೀಘ್ರವೇ ಜಾರಿಗೊಳಿಸಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪಅಂಡಗಿ ಚಿಲವಾಡಗಿ ಆಗ್ರಹಿಸಿದ್ದಾರೆ.

 ಉಡುಪಿ ಸರಕಾರಿ ನೌಕರರ ಭವನದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತ ನಾಡುತಿದ್ದರು. ರಾಜ್ಯ ಸರಕಾರ ಸುಪ್ರೀಂಕೋರ್ಟನ ಆದೇಶದಂತೆ ಸರಕಾರಿ ಅಂಗವಿಕಲ ನೌಕರರಿಗೆ ಬಡ್ತಿಯಲ್ಲಿ ಶೇ.3ರಷ್ಟು ಮಿಸಲಾತಿಯನ್ನು ಜಾರಿಗೊಳಿಸದಿದ್ದರೆ ಸಂಘದ ನೇತೃತ್ವದಲ್ಲಿ ಎ.1ರಂದು ರಾಜ್ಯಾದ್ಯಂತ ಕಪ್ಪು ಬಟ್ಟೆಧರಿಸಿ ಕರ್ತವ್ಯ ನಿರ್ವಹಿಸುವುದರೊಂದಿಗೆ ತಾಲೂಕಿನಲ್ಲಿ ತಹಶೀಲ್ದಾರ್ ಹಾಗೂ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಸುಮಾರು 30ಲಕ್ಷ ವಿಕಲಚೇತನರಿದ್ದು, ಇವರ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳ ಕುರಿತು ಚರ್ಚೆ ನಡೆಸಲು ವಿಕಲಚೇತನರ ಪ್ರತಿನಿಧಿ ಯನ್ನು ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು. ಆಗ ಮಾತ್ರ ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ ಜೊತೆಗೆ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

 ಅಂಗವಿಕಲರ ಕಲ್ಯಾಣ ಇಲಾಖೆಯು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧೀನದಲ್ಲಿದ್ದು, ಇದರಿಂದ ವಿಕಲಚೇತನರ ಅಭಿವೃದ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅಂಗವಿಕಲರಿಗೆ ಸಂಬಂದಿಸಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು.

  ವಿವಿಧ ವಿಕಲತೆಯುಳ್ಳ ಅಂಗವಿಕಲರ ಸಮಗ್ರ ಸಮೀಕ್ಷೆಯನ್ನು ನಡೆಸ ಬೇಕು. ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಬೇಕು. ವರ್ಗಾವಣೆಯ ಸಮಯದಲ್ಲಿ ಪದೇ ಪದೇ ಅಂಗವಿಕಲತೆಗೆ ಸಂಬಂಧಿಸಿ ದಂತೆ ಪ್ರಮಾಣ ಪತ್ರವನ್ನು ತರಲು ಸೂಚಿಸುವ ಕ್ರಮವನ್ನು ಸರಕಾರ ಕೈಬೀಡಬೇಕು ಎಂದರು.

ಶಿಕ್ಷಕರ ವರ್ಗಾವಣೆಯಲ್ಲಿ ವಿಕಲಚೇತನರ ಪ್ರಮಾಣ ಪತ್ರದ ಬಳಕೆ ಹೆಚ್ಚಾ ಗಿದ್ದು, ಇದರಿಂದ ಅರ್ಹ ವಿಕಲಚೇತನ ನೌಕರರಿಗೆ ತೊಂದರೆಯಾಗುತ್ತಿದೆ. ಆದುದರಿಂದ ನಕಲಿ ವಿಕಲಚೇತನರನ್ನು ಪತ್ತೆ ಹಚ್ಚಲು ಒಂದು ಸಮಿತಿಯನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾ ಸಂಘದ ನಿರ್ದೇಶಕ ಪ್ರಶಾಂತ್ ಶೆಟ್ಟಿ, ನಾಗೇಶ, ಎಚ್. ರಾಮಾಂಜಯ್ಯಿ, ಗುಣವತಿ, ಗೋಪಾಲ ಮೋಗೆರೆ, ಉದಯಕುಮಾರ ಶೆಟ್ಟಿ, ಅನಿತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News