ಪುರಸಭಾ ವ್ಯಾಪ್ತಿಯ ನಿವೇಶನ ರಹಿತರ ಸಮಾವೇಶ
ಕುಂದಾಪುರ, ಮಾ.14: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ಹಾಗೂ ಕುಂದಾಪುರ ಪುರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಮನೆ ನಿವೇಶನ ರಹಿತರ ಸಮಾವೇಶವು ಇತ್ತೀಚೆಗೆ ಕುಂದಾಪು ರ ಕಾರ್ಮಿಕ ಭವನದಲ್ಲಿ ಜರಗಿತು.
ಸಮಾವೇಶವನ್ನು ಉದ್ಘಾಟಿಸಿದ ಪುರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕ ಹಾಗೂ ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್.ನರಸಿಂಹ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಬಡನಿವೇಶನ ರಹಿತರು ಅರ್ಜಿ ಸಲ್ಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಿ ಎರಡು ವರ್ಷ ಕಳೆದರೂ ಮನೆ ನಿವೇಶನ ರಹಿತರಿಗೆ ಸ್ಥಳ ಮಂಜೂರು ಮಾಡಲು ಪುರಸಭೆ ಮೀನಾಮೇಷ ಎಣಿಸುತ್ತಿದೆ. ಆದುದರಿಂದ ಪುರಸಭೆ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಗುರುತಿಸಬೇಕು. ಇಲ್ಲದಿದ್ದರೆ ಖಾಸಗಿ ಜಾಗ ಖರೀದಿಸುವುದಕ್ಕೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಘದ ಮುಖಂಡರಾದ ಯು.ದಾಸ ಭಂಡಾರಿ, ರಾಜೀವ ಪಡುಕೋಣೆ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾ ವತಿ ಮೊದಲಾದವರು ಉಪಸ್ಥಿತರಿದ್ದರು.