ಬಾಳಿಗಾ ಹತ್ಯೆ ಆರೋಪಿ ನರೇಶ್ ಶೆಣೈ ವಿರುದ್ಧ ಮತ್ತೊಂದು ಪ್ರಕರಣ ದಾಖಲು
ಮಂಗಳೂರು, ಮಾ.14: ಸ್ವಾಮೀಜಿಯೊಬ್ಬರ ವಿರುದ್ಧ ದೂರು ನೀಡಿದ ಸಿಟ್ಟಿನಿಂದ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಯ ವಿರುದ್ಧ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಭರತ್ ಕಾಮತ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ.
ಆರೋಪಿ ನರೇಶ್ ಶೆಣೈಯು ಮಾ.12ರಂದು ಭರತ್ ಕಾಮತ್‌ರನ್ನು ಡೊಂಗರಕೇರಿ ಶಾಲೆಯ ಬಳಿ ಬರುವಂತೆ ತಿಳಿಸಿ ಅಲ್ಲಿ ಏಕಾಎಕಿ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಅಯ್ಯಪ್ಪಸ್ವಾಮಿ ದೇವರಲ್ಲ, ದೈವ ಎಂದು ಸಂಯಮೀಂದ್ರ ಸ್ವಾಮೀಜಿ ಭಾಷಣ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ಅಯ್ಯಪ್ಪ ಗುಡಿಗೆ ಹಾಕುವ ಹಣವನ್ನು ಕಾಶಿಮಠಕ್ಕೆ ನೀಡಬಹುದು ಎಂಬರ್ಥದಲ್ಲಿ ಮಾತನಾಡಿದ್ದು, ಅದನ್ನು ಆಕ್ಷೇಪಿಸಿ ಭರತ್ ಕಾಮತ್ ಮಾ.9ರಂದು ಸ್ವಾಮೀಜಿಯ ವಿರುದ್ಧ ಬಂದರ್ ಠಾಣೆಗೆ ದೂರು ನೀಡಿದ್ದರು.
ಈ ವಿಚಾರ ತಿಳಿದುಕೊಂಡ ಆರೋಪಿ ನರೇಶ್ ಶೆಣೈ, ದೂರನ್ನು ವಾಪಸ್ ಪಡೆಯಲು ಭರತ್ ಕಾಮತ್‌ರಿಗೆ ಒತ್ತಡ ಹಾಕಿದ. ಅದಕ್ಕೆ ಜಗ್ಗದಿದ್ದಾಗ ಮಾ.12ರಂದು ಡೊಂಗರಕೇರಿಗೆ ಕರೆಯಿಸಿ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ದೂರು ಸ್ವೀಕರಿಸಿರುವ ಬಂದರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಭರತ್ ಕಾಮತ್, ‘ಮಂಗಳೂರಿನ ಸಂಯಮೀಂದ್ರ ಸ್ವಾಮೀಜಿಯ ಹೇಳಿಕೆಯನ್ನು ಖಂಡಿಸಿ ನಾನು ಬಂದರ್ ಠಾಣೆಗೆ ದೂರು ನೀಡಲು ಹೋದ ವಿಚಾರ ತಿಳಿದ ನರೇಶ್ ಶೆಣೈ ದೂರು ವಾಪಸ್‌ಗೆ ಒತ್ತಡ ಹಾಕಿದ. ಅದಕ್ಕೆ ನಾನು ಒಪ್ಪಲಿಲ್ಲ. ‘ನಿನ್ನ ಜೊತೆ ಮಾತನಾಡಲಿಕ್ಕಿದೆ ಎಂದು ತಕ್ಷಣ ನನಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ. ಅದನ್ನು ನಾನು ಗಂಭೀರವಾಗಿ ಪರಿಗಣಿಸಲಿಲ್ಲ. ಮಾ.12ರಂದು ಕರೆದ ಮೇರೆಗೆ ನಾನು ಡೊಂಗರಕೇರಿಗೆ ಹೋದಾಗ ಏಕಾಎಕಿ ಹಲ್ಲೆ ನಡೆಸಿದ್ದಾನೆ’ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷದ ಮಾ.21ರಂದು ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ನರೇಶ್ ಶೆಣೈ ಪ್ರಮುಖ ಆರೋಪಿಯಾಗಿದ್ದ.