×
Ad

ಮುಲ್ಕಿ : ನೂತನ ಮದ್ರಸ ಕಟ್ಟಡ ಉದ್ಘಾಟನೆ

Update: 2017-03-14 23:45 IST

ಮುಲ್ಕಿ, ಮಾ.14: ಸಮಾಜದಲ್ಲಿರುವ ಧರ್ಮಗಳ ನಡುವೆ ಪರಸ್ಪರ ಅರಿತುಕೊಳ್ಳುವ ಮನೋಭಾವನೆ ಇದ್ದಾಗ ಸಮಾಜದಲ್ಲಿ ಸೌಹಾರ್ದ ವಾತಾವರಣ ಮೂಡುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ.

ಕಿನ್ನಿಗೋಳಿಯ ಪುನರೂರು ಮೊಹಮ್ಮದೀಯ ಜುಮ್ಮಾ ಮಸೀದಿ ಮತ್ತು ಮುಹಿಯುದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಮಸೀದಿ ವಠಾರದಲ್ಲಿ ನಡೆದ ಸ್ವಲಾತ್ ದಶಮಾನೋತ್ಸವ ಹಾಗೂ ಜಲಾಲಿಯಾ ರಾತೀಬ್ ಮತ್ತು ನೂತನ ಮದ್ರಸ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಹಾಗೂ ಧಾರ್ಮಿಕ ವಿದ್ವಾಂಸರ ಮುಂದಾಳತ್ವದಲ್ಲಿ ಯುವಜನತೆ ನಡೆಯುವಂತಾಗಬೇಕು. ಧರ್ಮಗಳ ನಡುವೆ ಇರುವ ಅಪನಂಬಿಕೆಗಳನ್ನು ತೊಡೆದುಹಾಕಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ದುವಾ ಹಾಗೂ ಶುಭಾಶೀರ್ವಚನ ನೀಡಿ ಮಾತನಾಡಿದ ಸುನ್ನಿ ಸಂಯುಕ್ತ ಜಮಾಅತ್ ಖಾಝಿ ಫಝಲ್ ಕೋಯಮ್ಮ ಕೂರ ತಂಙಳ್, ಅನ್ಯಾಯ, ಅಕ್ರಮ, ಅನಾಚಾರಗಳಿಂದ ದೂರವಿದ್ದಾಗ ಸೃಷ್ಟಿಕರ್ತನ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಆಧುನಿಕ ಜೀವನ ಶೈಲಿಯ ಮಧ್ಯೆ ಧಾರ್ಮಿಕ ವಿಚಾರಗಳನ್ನು ಯಾವತ್ತೂ ಮರೆಯುವಂತಾಗಬಾರದು ಎಂದರು.

ಇದೇ ವೇಳೆ ನೂತನ ಮದ್ರಸ ಕಟ್ಟಡವನ್ನು ಫಝಲ್ ಕೋಯಮ್ಮ ತಂಙಳ್ ಕೂರ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಟಿ.ಮಯ್ಯದ್ದಿ ಹಾಗೂ ಮದ್ರಸ ಕಟ್ಟಡ ನಿರ್ವಹಣಾ ಸಮಿತಿ ಅಧ್ಯಕ್ಷ ಉಮರ್ ಅಸಾದಿಯವರನ್ನು ಸನ್ಮಾನಿಸಲಾಯಿತು.

ಮಸೀದಿ ಖತೀಬರು ಪಿ.ಎಂ.ಎ. ಅಶ್ರಫ್ ರಝಾ ಅಂಜದಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಎಂ ಕೃಷ್ಣಾಪುರ ಖತೀಬರು ಉಮರುಲ್ ಫಾರೂಕ್ ಸಖಾಫಿ ಮುಖ್ಯ ಪ್ರಭಾಷಣಗೈದರು.

  ಮಸೀದಿ ಅಧ್ಯಕ್ಷ ಟಿ.ಮಯ್ಯದ್ದಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪದ್ಮಶಾಲಿ ಸಮಾಜ ಮಂದಿರ ಅಧ್ಯಕ್ಷ ಪ್ರಕಾಶ್, ಕಿನ್ನಿಗೋಳಿ ಜುಮ್ಮಾ ಮಸೀದಿ ಖತೀಬರು ಅಬ್ದುಲ್ ಲತೀಫ್ ಸಖಾಫಿ, ಹಸನ್ ಸಖಾಫಿ, ಕೆ.ಎಂ.ಇಬ್ರಾಹಿಂ ರಝ್ವಿ, ರಝಾಕ್ ಗೋಳಿಜೋರ, ಅಬ್ದುಲ್ ಖಾದರ್ ಗುತ್ತಕಾಡು, ಅಬ್ದುಲ್ ಹಮೀದ್ ಮಿಲನ್, ರಿಝ್ವಿನ್ ಪುನರೂರು, ಫಾರೂಕ್ ಪುನರೂರು ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಜಅಫರ್ ಸ್ವಾದಿಕ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News