ವಿಚಿತ್ರ ಸಮಸ್ಯೆ: ವಿಮಾನ ವಿಳಂಬಕ್ಕೆ ಶೌಚ ಕಾರಣ!

Update: 2017-03-15 04:19 GMT

ಹೊಸದಿಲ್ಲಿ, ಮಾ.15: ಇದು ಇಕ್ಕಟ್ಟಿನ ಸಮಸ್ಯೆ. ವಿಮಾನಯಾನ ಸಂಸ್ಥೆಗಳ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳುವಂತೆಯೂ ಇಲ್ಲ; ಅನುಭವಿಸುವಂತೆಯೂ ಇಲ್ಲ. ಅದೇನು ಎಂಬ ಕುತೂಹಲವೇ? ಅದು ಶೌಚ ಸಮಸ್ಯೆ.

ಭಾರತೀಯ ವಿಮಾನಯಾನಿಗಳ ವಿಚಿತ್ರ ನಡವಳಿಕೆಯಿಂದಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಒಬ್ಬ ಪ್ರಯಾಣಿಕ ಶೌಚಾಲಯಕ್ಕೆ ಬಳಸಿದ ಪ್ಲಾಸ್ಟಿಕ್ ಬಾಟಲಿ, ಶೌಚ ಕಾಗದದಂಥ ಯಾವ ವಸ್ತು ಎಸೆದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದು ಶೌಚಾಲಯದ ವ್ಯಾಕ್ಯೂಮ್ ಫ್ಲಶ್ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ವಸ್ತುವನ್ನು ಪತ್ತೆ ಮಾಡಿ ಹೊರತೆಗೆದು ವ್ಯವಸ್ಥೆ ಸರಿಪಡಿಸುವವರೆಗೂ ಶೌಚಾಲಯ ಬಂದ್ ಮಾಡಲೇಬೇಕಾಗುತ್ತದೆ. ಇದರಿಂದಾಗಿ ಮುಂದಿನ ವಿಮಾನವೂ ವಿಳಂವಾಗುತ್ತದೆ. ಹೀಗೆ ಸರಣಿ ಸಮಸ್ಯೆಗೆ ಇಂಥ ಸಣ್ಣ ವಿಷಯ ಕಾರಣವಾಗುತ್ತಿದೆ ಎಂದು ಏರ್‌ಇಂಡಿಯಾ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಹಿಂದೆ ನೀಲಿಬಣ್ಣದ ದ್ರವರೂಪದ ರಾಸಾಯನಿಕ ಶೌಚಾಲಯ ಫ್ಲಶ್ ವ್ಯವಸ್ಥೆ ಇತ್ತು. ಶೌಚಾಲಯದಲ್ಲಿ ಬ್ಲಾಕ್ ಆದಾಗ ಬಿಸಿನೀರು ಸುರಿದು, ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈಗ ಹೊಸ ಬೋಯಿಂಗ್ ವಿಮಾನಗಳಲ್ಲಿ ವ್ಯಾಕ್ಯೂಂ ಫ್ಲಶ್ ವ್ಯವಸ್ಥೆ ಇರುವುದು ಸಮಸ್ಯೆಯ ಮೂಲ. ತಿಂಗಳಿಗೆ 30-60 ಇಂಥ ಶೌಚಾಲಯ ಬ್ಲಾಕ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ವಿವರಿಸುತ್ತಾರೆ.

ಕಳೆದ ಶನಿವಾರ ದಿಲ್ಲಿ- ಚಿಕಾಗೋ ವಿಮಾನದ ವಿಳಂಬಕ್ಕೆ ಇಂಥ ಶೌಚಾಲಯ ದುರ್ಬಳಕೆ ಕಾರಣವಾಗಿತ್ತು ಎನ್ನುವುದು ಹೊಸ ಸುದ್ದಿ. ಈ ವಿಮಾನ ನಿಲ್ದಾಣದಿಂದ ಹೊರಟಾಗ 12 ಶೌಚಾಲಯಗಳ ಪೈಕಿ ಕೇವಲ ಎಂಟು ಮಾತ್ರ ಸುಸ್ಥಿತಿಯಲ್ಲಿದ್ದವು. 17 ಗಂಟೆಯ ಪ್ರಯಾಣವನ್ನು 340 ಯಾನಿಗಳು ಕೇವಲ ಎಂಟು ಶೌಚಾಲಯವನ್ನು  ಬಳಸಬೇಕಾಯಿತು ಎಂದು ಮೂಲಗಳು ಹೇಳಿವೆ.

"ಕಳೆದ ಆಗಸ್ಟ್‌ನಲ್ಲಿ ಏರ್‌ಇಂಡಿಯಾದ ನೆವಾರ್ಕ್- ಮುಂಬೈ ವಿಮಾನವನ್ನು ಇಸ್ತಾಂಬೂಲ್‌ನಲ್ಲಿ ಇದೇ ಕಾರಣದಿಂದ ದಿಢೀರನೇ ನಿಲ್ಲಿಸಬೇಕಾಯಿತು. ವಿಮಾನದ ಎಲ್ಲ 14 ಶೌಚಾಲಯಗಳೂ ಬ್ಲಾಕ್ ಆದದ್ದು ಇದಕ್ಕೆ ಕಾರಣ"

ವಿಮಾನಯಾನಿಗಳ ಅದರಲ್ಲೂ ಮುಖ್ಯವಾಗಿ ಭಾರತೀಯ ಯಾನಿಗಳ ನಾಗರಿಕ ಪ್ರಜ್ಞೆ ಕೊರತೆ ಇಂಥ ಸಮಸ್ಯೆಗೆ ಮೂಲ ಎಂದು ಅಧಿಕಾರಿಗಳು ಹೇಳುತ್ತಾರೆ. ಕೆಲವೊಮ್ಮೆ ಸಂಸ್ಕೃತಿ ವ್ಯತ್ಯಯವೂ ಇದಕ್ಕೆ ಕಾರಣವಾಗುತ್ತದೆ. ಪಾಶ್ಚಾತ್ಯಶೈಲಿಯ ಶೌಚಾಲಯ ಬಳಸಿ ರೂಢಿ ಇಲ್ಲದಿರುವುದು ಕೂಡಾ ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗುತ್ತಿದೆ.

ಪೇಪರ್ ಕಪ್ ಅಥವಾ ಬಳಸಿದ ಪೇಪರ್‌ಗಳನ್ನು ಶೌಚಾಲಯದಲ್ಲಿ ಹಾಕುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇಂಥ ಸಮಸ್ಯೆ ತಡೆಗೆ ವಿಮಾನಯಾನ ಸಂಸ್ಥೆಗಳು ಬಳಕೆ ವಿಡಿಯೊ ಪ್ರದರ್ಶನ, ಮಾಹಿತಿ ನೀಡುವಂಥ ಕ್ರಮಗಳನ್ನು ಅನುಸರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News