×
Ad

ಜೂಜಿಗಾಗಿ ಜಲ್ಲಿಕಟ್ಟು ಬಳಕೆ ಬೇಡ:ಸಂಘಟಕರಿಗೆ ಹೈಕೋರ್ಟ್ ಸೂಚನೆ

Update: 2017-03-15 17:54 IST

ಮದುರೈ,ಮಾ.15: ಗೂಳಿಗಳನ್ನು ಪಳಗಿಸುವ ಜಲ್ಲಿಕಟ್ಟು ಕ್ರೀಡೆಯನ್ನು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕ್ರೀಡೆಯನ್ನಾಗಿ ಪರಿಗಣಿಸುವಂತೆ ಮತ್ತು ಜೂಜಾಟದ ಉದ್ದೇಶಕ್ಕಾಗಿ ಅದರ ಬಳಕೆಗೆ ಅವಕಾಶ ನೀಡದಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಬುಧವಾರ ಸಂಘಟಕರಿಗೆ ಸೂಚಿಸಿದೆ.

ಪುದುಕೊಟ್ಟೈ ಜಿಲ್ಲೆಯ ಕಳಮವೂರ ಗ್ರಾಮದಲ್ಲಿ ಜಲ್ಲಿಕಟ್ಟು ನಡೆಸಲು ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶ ಕೋರಿ ಎಂ.ರಾಜೇಂದ್ರನ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಹುಲುವಾಡಿ ಜಿ.ರಮೇಶ ಮತ್ತು ಟಿ.ಎಸ್.ಶಿವಜ್ಞಾನಂ ಅವರನ್ನೊಳಗೊಂಡ ಪೀಠವು ಈ ಸೂಚನೆಯನ್ನು ನೀಡಿತು.

ಕಳಮವೂರ ಗ್ರಾಮದಲ್ಲಿ ಕಳೆದ 50 ವರ್ಷಗಳಿಂದಲೂ ದೇವಸ್ಥಾನದ ಉತ್ಸವದ ಅಂಗವಾಗಿ ಜಲ್ಲಿಕಟ್ಟು ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತಿವರ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಅಗತ್ಯವಾಗಿದೆ. ಈ ವರ್ಷ ಮಾ.11ರಂದು ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಲಾಗಿತ್ತಾದರೂ ಮಾ.16ರಂದು ಆಯೋಜಿಸಲಾ ಗಿರುವ ಕ್ರೀಡೆಗೆ ಈವರೆಗೂ ಅನುಮತಿಯನ್ನು ನೀಡಿಲ್ಲ ಎಂದು ರಾಜೇಂದ್ರನ್ ದೂರಿದ್ದರು.

ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಕ್ರೀಡೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News