×
Ad

​ಅಂತರ್ಜಾಲ ಬಳಕೆ ವೇಳೆ ಇರಲಿ ಎಚ್ಚರ: ಡಾ. ಅನಂತ ಪ್ರಭು

Update: 2017-03-15 19:35 IST

ಮಂಗಳೂರು, ಮಾ. 15: ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ (ಅಂತರ್ಜಾಲ)ಬಳಕೆ ಅತ್ಯಂತ ಮಹತ್ವದ್ದಾಗಿರುವ ಜತೆಯಲ್ಲೇ ಹಲವಾರು ರೀತಿಯ ಅಪಾಯಗಳಿಗೂ ಕಾರಣವಾಗುವ ಹಿನ್ನೆಲೆಯಲ್ಲಿ ಉಪಯೋಗದ ಸಂದರ್ಭ ಎಚ್ಚರ ಅತೀ ಅಗತ್ಯ ಎಂದು ವಿಕಾಸ ಪದವಿ ಪೂರ್ವ ಕಾಲೇಜಿನ ಸಲಹೆಗಾರ, ಸೈಬರ್ ಕ್ರೈಂ ತಜ್ಞರೂ ಆಗಿರುವ ಡಾ. ಅನಂತ ಪ್ರಭು ಜಿ. ಸಲಹೆ ನೀಡಿದ್ದಾರೆ.

ನಗರದ ರೋಶನಿ ಸಮಾಜ ಕಾರ್ಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಟನೆ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಮರಿಯಾ ಪೈವಾ ಕೊಸೆರೋ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಸೈಬರ್ ಅಪರಾಧ- ಜಾಗೃತಿ ಮತ್ತು ಸುರಕ್ಷತಾ ಕ್ರಮಗಳು' ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಇಂಟರ್‌ನೆಟ್ ಬಳಕೆ ಯಾವುದೇ ರೀತಿಯಲ್ಲೂ ಸುರಕ್ಷಿತವಾಗಿರುವುದಿಲ್ಲ, ಖಾಸಗಿಯೂ ಆಗಿರುವುದಿಲ್ಲ ಬದಲಾಗಿ ಅದು ನಮ್ಮ ಸ್ವಂತ ಆಸ್ತಿಯೂ ಆಗಿರದೆ ಅದು ಸಾರ್ವಜನಿಕವಾಗಿರುತ್ತದೆ. ಇದರಿಂದಾಗಿಯೇ ಇಂದು ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಅಪರಾಧಗಳಿಗೆ ಸಾಕಷ್ಟು ಮಂದಿ ಮೋಸ ಹೋಗುವ ಪ್ರಸಂಗಗಳೂ ಎದುರಾಗಿವೆ.

ಮೊಬೈಲ್ ಅಥವಾ ಕಂಪ್ಯೂಟರ್‌ಗಳಲ್ಲಿ ನಾವು ಗೂಗಲ್ ಬಳಕೆ ಮಾಡುವ ಸಂದರ್ಭ ನಾವು ತೆರೆದ ಸೈಟ್‌ಗಳು, ವೀಡಿಯೋಗಳು, ಫೋಟೋಗಳು ಶಾಶ್ವತವಾಗಿ ಉಳಿದುಬಿಡುವುದರಿಂದ ಸಾಫ್ಟ್‌ವೇರ್‌ಗಳನ್ನು ದುರುಪಯೋಗ ಪಡಿಸುವವರ ಮೂಲಕ ನಮ್ಮ ರಹಸ್ಯ ಅಥವಾ ಖಾಸಗಿ ಮಾಹಿತಿಗಳು ಸಾರ್ವಜನಿಕವಾಗಿ ಬಿಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಾವು ನಮ್ಮ ಈಮೇಲ್, ಫೇಸ್‌ಬುಕ್ ಮೊದಲಾದವುಗಳಿಗೆ ಉಪಯೋಗಿಸುವ ಪಾಸ್‌ವರ್ಡ್‌ಗಳು ಅತ್ಯಂತ ಗೌಪ್ಯವಾಗಿಡುವ ಜತೆಗೆ ಕಾಲಾನುಸಾರವಾಗಿ ಸುರಕ್ಷಿತ ಪಾಸ್‌ವರ್ಡ್‌ಗಳಿಗೆ ಬದಲಾಯಿಸುವ ಮೂಲಕ ನಮ್ಮನ್ನು ಸಾಕಷ್ಟು ರೀತಿಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಸೈಬರ್ ಭಯೋತ್ಪಾದನೆ ಬಗ್ಗೆ ಮಾಹಿತಿ ನೀಡಿದ ಅವರು, ಎಟಿಎಂ ಹಾಗೂ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಬಳಕೆ ಸಂದರ್ಭ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಅವರು ವಿದ್ಯಾರ್ಥಿಗಳಿಗೆ ವಿವರ ನೀಡಿದರು.

ರೋಶನಿ ಸಮಾಜ ಕಾರ್ಯ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲೆ ಡಾ. ಜೆಸಿಂತಾ ಡಿಸೋಜಾ, ಹಳೆ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಉಶಾ ರಾಣಿ ಮೊದಲಾದವರು ಉಪಸ್ಥಿತರಿದ್ದರು.

ಸಂಘಟನೆ ಅಧ್ಯಕ್ಷ ಸ್ಟೀವನ್ ಪಿಂಟೋ ಸ್ವಾಗತಿಸಿದರು. ಹಿರಿಯ ನಾಗರಿಕರಾದ ಒಲಿಂಡಾ ಪಿರೇರಾರವರು ಮರಿಯಾ ಪೈವಾ ಕೊಸೆರೋ ಅವರು ಕೈಗೊಂಡ ಸಮಾಜ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News