ಅಮೆರಿಕದ ವಿದ್ಯಾರ್ಥಿಗೆ ಕ್ಷಮೆ ನೀಡುವಂತೆ ಉತ್ತರ ಕೊರಿಯಕ್ಕೆ ವಾಶಿಂಗ್ಟನ್ ಮನವಿ

Update: 2017-03-15 15:26 GMT

ವಾಶಿಂಗ್ಟನ್, ಮಾ. 15: ಹೊಟೇಲೊಂದರಿಂದ ಕಳೆದ ವರ್ಷ ರಾಜಕೀಯ ಬ್ಯಾನರೊಂದನ್ನು ಕದ್ದಿರುವುದಕ್ಕಾಗಿ 15 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಒಳಗಾಗಿರುವ ಅಮೆರಿಕದ ವಿದ್ಯಾರ್ಥಿಯೊಬ್ಬನನ್ನು ಕ್ಷಮಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ಉತ್ತರ ಕೊರಿಯವನ್ನು ಒತ್ತಾಯಿಸಿದೆ.

ಪರಮಾಣು ಬಾಂಬ್ ಸನ್ನದ್ಧ ಕ್ಷಿಪಣಿಯೊಂದನ್ನು ಸಿದ್ಧಪಡಿಸುವ ಉತ್ತರ ಕೊರಿಯದ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಜಪಾನ್, ದಕ್ಷಿಣ ಕೊರಿಯ ಮತ್ತು ಚೀನಾ ಭೇಟಿಗೆ ಆಗಮಿಸುತ್ತಿರುವಂತೆಯೇ, ಒಟ್ಟೊ ವಾಂರ್ಬಿಯರ್‌ರನ್ನು ‘ತಕ್ಷಣ ಬಿಡುಗಡೆಗೊಳಿಸಿ’ ಎಂಬ ಆಗ್ರಹವೂ ಕೇಳಿಬಂದಿದೆ.

‘‘ಅವರು ಮಾಡಿದ್ದಾರೆನ್ನಲಾದ ಕೃತ್ಯಕ್ಕೆ ಅವರಿಗೆ ನೀಡಲಾಗಿರುವ ಶಿಕ್ಷೆ ತೀರಾ ಅತಿಯಾಯಿತು ಎಂದು ನಾವು ಭಾವಿಸುತ್ತೇವೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಕ್ ಟೋನರ್ ಹೇಳಿದರು.

‘‘ವಿದ್ಯಾರ್ಥಿಗೆ ವಿಶೇಷ ಕ್ಷಮಾದಾನ ನೀಡಿ ಮಾನವೀಯ ಆಧಾರದಲ್ಲಿ ತಕ್ಷಣ ಬಿಡುಗಡೆ ಮಾಡುವಂತೆ ನಾವು ಉತ್ತರ ಕೊರಿಯವನ್ನು ಒತ್ತಾಯಿಸುತ್ತೇವೆ’’ ಎಂದು ಟೋನರ್ ಹೇಳಿದರು.

ತನ್ನ ವಯಸ್ಸಿನ 20ರ ದಶಕದಲ್ಲಿರುವ ವಾಂರ್ಬಿಯರ್, ಪ್ಯಾಂಗ್‌ಯಾಂಗ್‌ನ ಹೊಟೇಲೊಂದರಲ್ಲಿ ಇದ್ದಾಗ ಹೊಟೇಲ್‌ನಲ್ಲಿದ್ದ ಪ್ರಚಾರ ಭಿತ್ತಿಪತ್ರವೊಂದನ್ನು ಕದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ತನ್ನ ಆರೋಪವನ್ನು ಒಪ್ಪಿಕೊಂಡಿರುವ ಅವರಿಗೆ ಉತ್ತರ ಕೊರಿಯದ ಸುಪ್ರೀಂ ಕೋರ್ಟ್ ಕಳೆದ ವರ್ಷದ ಮಾರ್ಚ್ 16ರಂದು ಕಠಿಣ ಶಿಕ್ಷೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News