×
Ad

ಮಂಗಳೂರು: ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹತ್ಯೆಗೆ ಯತ್ನ

Update: 2017-03-16 11:22 IST

ಮಂಗಳೂರು, ಮಾ.16: ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಯತ್ನಿಸಿರುವ ಘಟನೆ ಬುಧವಾರ ನಡೆದಿದೆ. ನರೇಂದ್ರ ನಾಯಕ್ ಈ ಬಗ್ಗೆ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬುಧವಾರ ಬೆಳಗ್ಗೆ 6:25ಕ್ಕೆ ಲೇಡಿಹಿಲ್ ಸಮೀಪದ ತನ್ನ ಮನೆಯಿಂದ ಮಂಗಳಾ ಕ್ರೀಡಾಂಗಣದ ಈಜುಕೊಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು, ನಿಲ್ಲಿಸದೇ ಇದ್ದಾಗ ತನ್ನ ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಹೇಳಿರುವುದಾಗಿ ನರೇಂದ್ರ ನಾಯಕ್ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಂದಿನ ಮಾರ್ಚ್ 21ರಂದು ನಗರದ ವೆಂಕರಮಣ ದೇವಳ ಬಳಿಯಿಂದ ಬಾಳಿಗಾ ಮನೆಯ ವರೆಗೆ ಮೆರವಣಿಗೆ ಹಮ್ಮಿಕೊಂಡಿರುವುದರಿಂದ ದುಷ್ಕರ್ಮಿಗಳು ನರೇಂದ್ರ ನಾಯಕ್‌ರ ಕೊಲೆಗೆ ಸಂಚು ರೂಪಿಸಿರಬಹುದು ಎಂದು ಆರೋಪಿಸಲಾಗಿದೆ. ಬಾಳಿಗಾ ಹತ್ಯೆ ಪ್ರಕರಣದ ಆರೋಪಿಗಳೇ ಈ ಕೃತ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಗನ್‌ಮ್ಯಾನ್ ಭದ್ರತೆ: 

ಬಾಳಿಗಾ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ನರೇಂದ್ರ ನಾಯಕ್‌ರಿಗೆ ಈ ಹಿಂದೆ ಬೆದರಿಕೆ ಇದ್ದುದರಿಂದ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇದೀಗ ಅವರಿಗೆ ನಿರಂತರ (ದಿನದ 24 ಗಂಟೆ) ಗನ್‌ಮ್ಯಾನ್ ಭದ್ರತೆಯನ್ನು ಒದಗಿಸಲಾಗಿದೆ.
ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ದಾಳಿಗೆ ವಿಫಲ ಯತ್ನ:

ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಯುವಕರು ನನ್ನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿ ಬಂದಿದ್ದಾರೆ ಎಂದು ನರೇಂದ್ರ ನಾಯಕ್ ಆರೋಪಿಸಿದ್ದಾರೆ. ಮೊದಲು ತನ್ನ ಕಾರನ್ನು ತಡೆಯಲು ಯತ್ನಿಸಿದ್ದು, ಅನಂತರ ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಹೇಳಿರುವುದನ್ನು ಗಮನಿಸಿದರೆ, ಒಂದು ವೇಳೆ ನಾನು ಎಂಜಿನ್ ಆಫ್ ಮಾಡಿ ಕಾರಿನಿಂದ ಕೆಳಗಿಳಿಯುತ್ತಿದ್ದರೆ ಆರೋಪಿಗಳು ನನ್ನ ಮೇಲೆ ದಾಳಿ ನಡೆಸುವ ಅಪಾಯ ಇತ್ತು. ಇದರಿಂದಾಗಿ ನಾನು ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋದೆ ಎಂದು ಅವರು ತಿಳಿಸಿದ್ದಾರೆ.

ಬಾಳಿಗಾ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದೇವೆ:

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರವರ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಗುರುತಿಸಿಕೊಂಡಿರುವುದೇ ದಾಳಿ ಯತ್ನಕ್ಕೆ ಕಾರಣವಾಗಿರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾ.21ರಂದು ವೆಂಕರಣದ ದೇವಳ ಬಳಿಯಿಂದ ಮೆರವಣಿಗೆ:

ಬಾಳಿಗಾ ಹತ್ಯೆಯಾಗಿ ಒಂದು ವರ್ಷಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾ.21ರಂದು ನಗರದ ವೆಂಕಟರಮಣ ದೇವಳದ ಬಳಿಯಿಂದ ಬಾಳಿಗಾರ ಮನೆಯವರೆಗೆ ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ. ಅಂದು ಸಂಜೆ 4 ಗಂಟೆಗೆ ಕಲಾಕುಂಜ ಸಿಬಿಇಯು ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿದ್ದೇವೆ. ಬಾಳಿಗಾ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಹೋರಾಟದಲ್ಲಿ ನಾನು ತೊಡಗಿಸಿಕೊಂಡಿರುವುದರಿಂದ ಈ ದಾಳಿ ಯತ್ನ ನಡೆದಿರಬಹುದು ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.


ಎಂದಿನಂತೆ ಬುಧವಾರ ಬೆಳಗ್ಗೆ 6:25ಕ್ಕೆ ಲೇಡಿಹಿಲ್ ಸಮೀಪದ ತಮ್ಮ ಮನೆಯಿಂದ ಕಾರಿನಲ್ಲಿ ಮಂಗಳಾ ಕ್ರೀಡಾಂಗಣದ ಈಜುಕೊಳಕ್ಕೆ ಹೊರಟಿದ್ದೆ. ಮನೆಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತ ಇಬ್ಬರು ಯುವಕರು ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ನಾನು ಅಪರಿಚಿತ ಯುವಕರ ಮಾತಿಗೆ ಮಣೆ ಹಾಕದೆ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದೇನೆ. ಕಾರನ್ನು ಹಿಂಬಾಲಿಸಿದ ಯುವಕರು ನಿಮ್ಮ ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾರೆ. ಅದಕ್ಕೆ ನಾನು ಕಾರಿನ ಟಯರ್ ಟ್ಯೂಬ್‌ಲೆಸ್ ಆಗಿದ್ದು ಪಂಕ್ಚರ್ ಆಗಲು ಸಾಧ್ಯವಿಲ್ಲ ಎಂದೆ. ಆದರೂ ನಾನು ಸ್ವಲ್ಪ ದೂರದ ಪೆಟ್ರೋಲ್ ಬಂಕ್‌ನಲ್ಲಿ ಕಾರನ್ನು ನಿಲ್ಲಿಸಿ ಟಯರ್‌ನ್ನು ಪರಿಶೀಲಿಸಿದೆ. ಕಾರಿನ ನಾಲ್ಕು ಚಕ್ರಗಳು ಕೂಡಾ ಸುಸ್ಥಿತಿಯಲ್ಲಿತ್ತು ಎಂದು ನರೇಂದ್ರ ನಾಯಕ್ ಘಟನೆಯನ್ನು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News