ಮೂವರು ಮಕ್ಕಳನ್ನು ನೀರಿನ ಟ್ಯಾಂಕ್‌ಗೆ ಎಸೆದು ಕೊಂದ ತಾಯಿ !
ಚಂಡೀಗಢ, ಮಾ.16: ಗೃಹಿಣಿಯೊಬ್ಬಳು ತನ್ನ 5 ಹಾಗೂ 3ರ ಹರೆಯದ ಇಬ್ಬರು ಹೆಣ್ಣು ಮಕ್ಕಳು ಹಾಗೂ ಆರು ತಿಂಗಳ ಗಂಡು ಮಗುವನ್ನು ಮನೆ ಸಮೀಪದ ನೀರಿನ ಟ್ಯಾಂಕ್‌ಗೆ ಎಸೆದು ಕೊಂದು ನಂತರ ತಾನೂ ನೀರಿಗೆ ಹಾರಿ ಆತ್ಮಹತ್ಯೆಗೈಯ್ಯಲು ಯತ್ನಿಸಿದ ಘಟನೆ ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಬದನ ಗ್ರಾಮದಿಂದ ಮಂಗಳವಾರ ವರದಿಯಾಗಿದೆ.
ದಾಂಪತ್ಯ ವಿರಸದಿಂದ ನೂರನ್ ಎಂಬ ಈ 35 ವರ್ಷದ ಮಹಿಳೆ ಈ ಕ್ರಮಕ್ಕೆ ಮೊರೆ ಹೋಗಿದ್ದಳೆಂದು ತಿಳಿದು ಬಂದಿದೆ. ಸುಮಾರು ಎಂಟು ಅಡಿ ಆಳವಿದ್ದ ಈ ಟ್ಯಾಂಕ್‌ಗೆ ತನ್ನ ಮೂವರು ಮಕ್ಕಳನ್ನು ಎಸೆದ ಬಳಿಕ ತಾನೂ ನೀರಿನ ಟ್ಯಾಂಕ್ ಗೆ ಧುಮುಕುವ ಮುನ್ನ ಪೊಲೀಸರಿಗೆ ಕರೆ ಮಾಡಿದ ನೂರ್ ತನಗೆ ತನ್ನ ‘ಗಂಡನ ದುರಭ್ಯಾಸಗಳಿಂದ’ ರೋಸಿ ಹೋಗಿದೆ ಹಾಗೂ ತಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡುವುದಾಗಿ ತಿಳಿಸಿದ್ದಳು.
ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರೂ ಅದಾಗಲೇ ಮಕ್ಕಳು ಮೃತ ಪಟ್ಟಿದ್ದರು. ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.