ನಾಪತ್ತೆಯಾದ ಮಗ ವಾರದ ಬಳಿಕ ಮಗಳಾಗಿ ಬಂದಳು !
ಅಹ್ಮದಾಬಾದ್,ಮಾ.16: ಮಾಧವಪುರದ ಪ್ರತಿಷ್ಠಿತ ಚಿನ್ನಾಭರಣ ವ್ಯಾಪಾರಿಯೋರ್ವರ ಕಿರಿಯ ಪುತ್ರ ಶ್ಯಾಮ್(25) ಒಂದು ವಾರದಿಂದಲೂ ನಾಪತ್ತೆಯಾಗಿದ್ದ. ಮನೆಯವರು ಈ ಬಗ್ಗೆ ಪೊಲೀಸರಲ್ಲಿ ದೂರನ್ನೂ ಸಲ್ಲಿಸಿದ್ದರು. ಹೀಗಾಗಿ ಮನೆಯಲ್ಲಿನ ಪೋನ್‌ನ ಗಂಟೆ ಬಡಿದುಕೊಂಡಾಗ ಎಲ್ಲರೂ ಕಾತರದಿಂದ ಓಡಿ ಬಂದಿದ್ದರು. ನಿರೀಕ್ಷಿಸಿದಂತೆ ಅದು ಪೊಲೀಸರ ಕರೆಯಾಗಿತ್ತು. ಅವರು ಆಶಿಸಿದ್ದಂತೆ ಪೊಲೀಸರು ‘ನಿಮ್ಮ ಮಗು ಸಿಕ್ಕಿದೆ ’ಎಂದು ಹೇಳಿದ್ದರು. ಆದರೆ ‘ಶ್ಯಾಮ್ ಈಗ ನಿಮ್ಮ ಮಗನಾಗಿ ಉಳಿದಿಲ್ಲ,ಮಗಳಾಗಿದ್ದಾಳೆ’ಎಂದು ಪೊಲೀಸರು ಹೇಳುತ್ತಾರೆಂದು ಆ ಕುಟುಂಬ ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ !
ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಶ್ಯಾಮ್ ಮನೆಯಿಂದ ನಾಪತ್ತೆ ಯಾಗಿದ್ದ.ಆತನ ಹೆತ್ತವರು ಮತ್ತು ತಂಗಿ ಈ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ.
ಶ್ಯಾಮ್ ಪದವೀಧರನಾಗಿದ್ದು, ಕುಟುಂಬದ ವ್ಯವಹಾರದಲ್ಲಿ ಕೈಜೋಡಿಸಿದ್ದ. ಕೆಲವು ವರ್ಷಗಳ ಹಿಂದಿನಿಂದಲೂ ಆತನಿಗೆ ತಾನು ಗಂಡಲ್ಲ,ಗಂಡಿನ ಶರೀರದಲ್ಲಿರುವ ಹೆಣ್ಣು ಎಂದು ಅನಿಸುತ್ತಿತ್ತು. ತಾನು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದಾಗ ಮನೆಯವರು ಒಪ್ಪಿರಲಿಲ್ಲ. ಅಸಲಿಗೆ ತಾನು ಹೆಣ್ಣು ಎಂಬ ಆತನ ಹೇಳಿಕೆಯನ್ನೇ ಅವರು ನಂಬಿರಲಿಲ್ಲ. ಅದೇ ಕೊನೆ, ಶ್ಯಾಮ್ ಮತ್ತೆಂದೂ ಆ ವಿಷಯವನ್ನು ಮನೆಯಲ್ಲಿ ಎತ್ತಿರಲಿಲ್ಲ. ಹೀಗಾಗಿ ಕಳೆದ ವಾರ ಶ್ಯಾಮ್ ನಾಪತ್ತೆಯಾಗುವವರೆಗೂ ಎಲ್ಲವೂ ಸರಿಹೋಯಿತು ಎಂದು ಮನೆಯವರು ನೆಮ್ಮದಿಯಿಂದಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನಾರಂಭಿಸಿದ್ದ ಪೋಲಿಸರು ಮೊಬೈಲ್ ಟವರ್ ನೆರವಿನಿಂದ ಆತ ನವರಂಗಪುರದಲ್ಲಿದ್ದಾನೆ ಎಂಬ ಮಾಹಿತಿ ಪಡೆದಿದ್ದರು. ಅಲ್ಲಿಗೆ ತೆರಳಿ ಹುಡುಕಾಡಿದಾಗ ಖಾಸಗಿ ಆಸ್ಪತ್ರೆಯೊಂದರ ಹೊರಗೆ ಆತನ ಬೈಕ್ ಪತ್ತೆಯಾಗಿತ್ತು. ಶ್ಯಾಮ್ ಅಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ. ತಾನು ಸ್ವಂತ ಇಚ್ಛೆಯಿಂದ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಗಿ ಆತ ಹೇಳಿಕೆ ನೀಡಿದ್ದು, ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
ಶ್ಯಾಮ್ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹಿಂದೆಯೇ ನಿರ್ಧರಿಸಿದ್ದ. ಪೂರ್ವಸಿದ್ಧತೆಯಾಗಿ ಕಳೆದ ಒಂದೂವರೆ ವರ್ಷಗಳಿಂದಲೂ ಆತ ಹಾರ್ಮೋನ್ ಬದಲಾವಣೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ.
ಕುಟುಂಬದ ಸದಸ್ಯರು ಆಸ್ಪತ್ರೆಗೆ ಧಾವಿಸಿದ್ದರಾದರೂ ಶ್ಯಾಮ್ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾನೆ. ಈ ನಿಟ್ಟಿನಲ್ಲಿ ಪೊಲೀಸರ ಪ್ರಯತ್ನವೂ ವಿಫಲಗೊಂಡಿದೆ ಜಂಡರ್ ಡಿಸ್‌ಫೋರಿಯಾ
ವ್ಯಕ್ತಿಯೋರ್ವ ತನ್ನ ಶರೀರದ ಬಗ್ಗೆ ಇರಿಸುಮುರಿಸುಗೊಂಡು,ತಾನು ಹೆಣ್ಣು ಎಂದು ಭಾವಿಸುವ ವೈಕಲ್ಯವನ್ನು ಜಂಡರ್ ಡಿಸ್‌ಫೋರಿಯಾ ಎನ್ನುತ್ತಾರೆ.ಇಂತಹವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುತ್ತದೆ. ಅಗತ್ಯವಾದರೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ ಮತ್ತು ಪುರುಷ ಪರಿಪೂರ್ಣ ಮಹಿಳೆಯಾಗಿ ಬದಲಾಗುತ್ತಾನೆ.