×
Ad

ಪೂರ್ವ ನಿಗದಿತ ಧಾರ್ಮಿಕ ಪ್ರಭಾಷಣಕ್ಕೆ ಕಬೀರ್ ಬಾಖವಿ ಬಾರದಿರುವ ಬಗ್ಗೆ ಸ್ಪಷ್ಟೀಕರಣಕ್ಕೆ ಆಗ್ರಹ

Update: 2017-03-16 15:28 IST

ಮಂಗಳೂರು, ಮಾ.16: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಹೈದ್ರೋಸಿಯಾ ಜುಮ್ಮಾ ಮಸೀದಿ ಸುಜೀರು ಮಲ್ಲಿ ಆಶ್ರಯದಲ್ಲಿ ಮಾ.10ರಂದು ನಿಗದಿಪಡಿಸಿದ್ದ ಮತ ಪ್ರಭಾಷಣಕ್ಕೆ ಹಾಫಿಲ್ ಅಹಮ್ಮದ್ ಕಬೀರ್ ಬಾಖವಿಯವರು ಬಾರದಿರುವುದರಿಂದ ಊರಿನಲ್ಲಿ ತಮ್ಮ ಮಾನ ಹರಾಜುಗೊಂಡಿದೆ ಎಂದು ಮಸೀದಿಯ ಆಡಳಿತ ಸಮಿತಿ ದೂರಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಮಸೀದಿಯ ಜತೆ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್, ಕಾರ್ಯಕ್ರಮದ ದಿನಾಂಕವನ್ನು 48 ದಿನಗಳ ಮೊದಲೇ ನಿಗದಿಪಡಿಸಿ ಭಾಗವಹಿಸುವ ಸಮ್ಮತಿಯನ್ನು ಕಬೀರ್ ಬಾಖವಿಯವರು ನೀಡಿದ್ದರು ಎಂದರು.

ದಿನಾಂಕ ನಿಗದಿಪಡಿಸಿದ ಬಳಿಕ ಜಮಾಅತಿನವರು ಕಾರ್ಯಕ್ರಮದ ಪ್ರಚಾರದ ಬ್ಯಾನರ್, ಚಾರ್ಟ್, ಪೋಸ್ಟರನ್ನು ಜಿಲ್ಲೆಯ ಎಲ್ಲಾ ಕಡೆ ಹಾಕಿದ್ದರು. ಜಮಾಅತಿಗೆ ದಫನ ಭೂಮಿಗೆ ಜಾಗವನ್ನು ಖರೀದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಮೂರು ದಿನಗಳಿರುವಾಗ ಮೊಬೈಲ್‌ಗೆ ವಾಯ್ಸ್ ಮೆಸೇಜ್ ಮೂಲಕ ನಿಗದಿತ ದಿನದಂದು ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ. ಎ.16ರಂದು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಬಾಖವಿಯವರು ತಿಳಿಸಿದ್ದರು.

ಆದರೆ ಅದಾಗಲೇ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿದ್ದರಿಂದ ಅದನ್ನು ಮುಂದೂಡಲು ಅಸಾಧ್ಯವಾಗಿತ್ತು. ಈ ಬಗ್ಗೆ ಬಾಖವಿಯರ ಏಜೆಂಟರ ಬಳಿ ಮಾತನಾಡಿ ಮೊಬೈಲ್ ಮೂಲಕ ಬಾಖವಿಯವರನ್ನು ಕಾರ್ಯಕ್ರಮಕ್ಕೆ ಬರುವಂತೆ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಜಮಾಅತ್‌ನವರಿಗೆ ಅನ್ಯಾಯವಾಗಿದೆ. ಊರಿನಲ್ಲಿ ಎಲ್ಲರೂ ಕೆಟ್ಟದಾಗಿ ಮಾತನಾಡಿಕೊಳ್ಳುವಂತಾಗಿದೆ. ಹಾಗಾಗಿ ನಮಗೆ ನ್ಯಾಯ ಬೇಕು. ಕಬೀರ್ ಬಾಖವಿಯವರು ಸ್ಪಷ್ಟನೆ ನೀಡಬೇಕು. ಈ ಬಗ್ಗೆ ನಾವು ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಮಾಅತ್‌ಗೆ ದಫನ ಭೂಮಿಯನ್ನು ಒದಗಿಸುವ ಒಳ್ಳೆಯ ಉದ್ದೇಶದಿಂದ ಪ್ರಾಯೋಜಕರ ಮೂಲಕ ಈ ಕಾರ್ಯಕ್ರಮಕ್ಕೆ ನಾವು ಸಿದ್ಧತೆ ಮಾಡಿದ್ದೆವು. ಆದರೆ ಯಾವ ಕಾರಣಕ್ಕಾಗಿ ಕೊನೆ ಘಳಿಗೆಯಲ್ಲಿ ಬಾಖವಿಯವರು ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕಿದ್ದಾರೆ ಎಂಬ ಬಗ್ಗೆ ಅವರು ನಮಗೆ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಕೆ. ಖಾದರ್, ಕಾರ್ಯದರ್ಶಿ ಎಸ್. ಇಬ್ರಾಹೀಂ, ಅಶ್ರಫ್, ರಿಯಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News