ಸಂಸದೆಯರ ಅನುಪಾತದಲ್ಲಿ ಭಾರತಕ್ಕೆ 148ನೆ ಸ್ಥಾನ :ಮಹಿಳಾ ಮೀಸಲಾತಿಗೆ ವಿಶ್ವಸಂಸ್ಥೆ ಕರೆ
ವಿಶ್ವಸಂಸ್ಥೆ (ನ್ಯೂಯಾರ್ಕ್), ಮಾ. 16: ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ಪೈಕಿ, ಮಹಿಳಾ ಸದಸ್ಯರ ಅನುಪಾತದಲ್ಲಿ ಭಾರತ 148ನೆ ಸ್ಥಾನದಲ್ಲಿದೆ. ಪಟ್ಟಿಯನ್ನು ಬಿಡುಗಡೆ ಮಾಡಿದ ವಿಶ್ವಸಂಸ್ಥೆಯ ಮಹಿಳಾ ಘಟಕದ ಮುಖ್ಯಸ್ಥೆ ಫುಮ್‌ಝೈಲ್ ಮ್ಲಾಂಬೊ-ಎನ್‌ಕುಕ, ಸಂಸತ್ತುಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಪಟ್ಟಿಯನ್ನು ಇಲ್ಲಿ ಬುಧವಾರ ಫುಮ್‌ಝೈಲ್ ಮ್ಲಾಂಬೊ-ಎನ್‌ಕುಕ ಮತ್ತು ಅಂತರ್ ಸಂಸದೀಯ ಒಕ್ಕೂಟ (ಐಪಿಯು) ಜಂಟಿಯಾಗಿ ಬಿಡುಗಡೆ ಮಾಡಿದರು.
ಲೋಕಸಭೆಯಲ್ಲಿ 11.8% (542 ಸದಸ್ಯ ಬಲದ ಸದನದಲ್ಲಿ 64) ಮತ್ತು ರಾಜ್ಯಸಭೆಯಲ್ಲಿ 11% (245 ಸದಸ್ಯ ಬಲದ ಸದನದಲ್ಲಿ 27) ಮಹಿಳಾ ಸದಸ್ಯರಿದ್ದಾರೆ ಎಂಬುದಾಗಿ ಪಟ್ಟಿ ತಿಳಿಸುತ್ತದೆ.
ಮಹಿಳಾ ಸಚಿವರ ಅನುಪಾತದಲ್ಲಿ ಭಾರತ 88ನೆ ಸ್ಥಾನದಲ್ಲಿದೆ. ಭಾರತೀಯ ಸಚಿವ ಸಂಪುಟದಲ್ಲಿ ಐವರು (18.5%) ಮಹಿಳೆಯರಿದ್ದಾರೆ.
ಆದಾಗ್ಯೂ, ಮಹಿಳೆಯರು ಮಹತ್ವದ ಹುದ್ದೆಗಳಲ್ಲಿದ್ದಾರೆ. ಸುಮಿತ್ರಾ ಮಹಾಜನ್ ಲೋಕಸಭೆಯ ಸ್ಪೀಕರ್ ಆಗಿದ್ದರೆ, ಸುಶ್ವಾ ಸ್ವರಾಜ್ ವಿದೇಶ ವ್ಯವಹಾರಗಳ ಸಚಿವೆಯಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಐಪಿಯು ಮಹಾಕಾರ್ಯದರ್ಶಿ ಮಾರ್ಟಿನ್ ಚುನ್‌ಗಾಂಗ್, ಮಹಿಳೆಯರಿಗೆ ಮೀಸಲಾತಿ ನಿಗದಿಪಡಿಸಬೇಕೆಂಬ ಬೇಡಿಕೆಗಳನ್ನು ಬೆಂಬಲಿಸಿದರು. ಮೀಸಲಾತಿಯು ಲಿಂಗ ಸಮಾನತೆ ಸಾಧಿಸುವ ಪ್ರಕ್ರಿಯೆಗೆ ವೇಗ ನೀಡಬಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
ಈಗಿನ ಅಭಿವೃದ್ಧಿ ದರದಂತೆ, ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗೆ ಸರಿಗಟ್ಟಲು 50 ವರ್ಷಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.
ಪ್ರಥಮ ಸ್ಥಾನದಲ್ಲಿ ರುವಾಂಡ
ಮಹಿಳಾ ಸಂಸದರ ಅನುಪಾತದಲ್ಲಿ, ಕೆಳಮನೆಯಲ್ಲಿ 61.3% ಮಹಿಳೆಯರನ್ನು ಹೊಂದಿರುವ ರುವಾಂಡ ಪ್ರಥಮ ಸ್ಥಾನದಲ್ಲಿದೆ. ಎರಡು ಮತ್ತು ಮೂರನೆ ಸ್ಥಾನಗಳಲ್ಲಿ ಕ್ರಮವಾಗಿ 53.1 % ಅನುಪಾತ ಹೊಂದಿರುವ ಬೊಲಿವಿಯ ಮತ್ತು 48.9 % ಅನುಪಾತ ಹೊಂದಿರುವ ಕ್ಯೂಬ ಇವೆ.
ದಕ್ಷಿಣ ಏಶ್ಯದಲ್ಲಿ, ಕೆಳಮನೆಯಲ್ಲಿ 29.6% ಮಹಿಳಾ ಅನುಪಾತದೊಂದಿಗೆ ನೇಪಾಳ 48ನೆ ಸ್ಥಾನ ಹೊಂದಿದ್ದರೆ, ಪಾಕಿಸ್ತಾನ 20.6 % ಅನುಪಾತದೊಂದಿಗೆ 89ನೆ ಸ್ಥಾನದಲ್ಲಿದೆ. ಬಾಂಗ್ಲಾದೇಶ 20.3 % ದೊಂದಿಗೆ 91ನೆ ಸ್ಥಾನದಲ್ಲಿದ್ದರೆ, 5.8% ಮಹಿಳಾ ಅನುಪಾತದೊಂದಿಗೆ ಶ್ರೀಲಂಕಾ 179ನೆ ಸ್ಥಾನದಲ್ಲಿದೆ.
ಮಹಿಳಾ ಸಚಿವರ ಪಟ್ಟಿಯಲ್ಲಿ 52.9% ಪ್ರಾತಿನಿಧ್ಯ ನೀಡಿರುವ ಬಲ್ಗೇರಿಯ, ಫ್ರಾನ್ಸ್ ಮತ್ತು ನಿಕಾರಗುವ ಮೊದಲ ಸ್ಥಾನವನ್ನು ಹಂಚಿಕೊಂಡಿವೆ.