ಸಚಿವ ರಮಾನಾಥ ರೈ ಆಸ್ಪತ್ರೆಗೆ ದಾಖಲು
ಮಂಗಳೂರು/ಬಂಟ್ವಾಳ, ಮಾ. 16: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ರಮಾನಾಥ ರೈರವರ ಆರೋಗದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಳಿಕ ಅವರು ಚೇತರಿಸಿಕೊಂಡಿದ್ದಾರೆ.
ಯಾರು ಕೂಡಾ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರ ಜೊತೆಯಲ್ಲಿರುವ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ, ಬಿ.ಎಚ್. ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಸಚಿವ ರಮಾನಾಥ ರೈ ತನ್ನ ಬೆಂಗಳೂರಿನ ನಿವಾಸದಲ್ಲಿ ತಯಾರಿ ನಡೆಸುತ್ತಿದ್ದ ವೇಳೆ ರಕ್ತದೊತ್ತಡದಿಂದಾಗಿ ಅಲ್ಪ ಪ್ರಮಾಣದ ತಲೆ ಸುತ್ತು ಕಾಣಿಸಿಕೊಂಡಿದೆ. ಈ ವೇಳೆ ತಾನೂ ಅವರ ಜೊತೆ ಇದ್ದು, ತಕ್ಷಣ ಸಚಿವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿ.ಎಚ್. ಖಾದರ್ ತಿಳಿಸಿದ್ದಾರೆ.
ಕಳೆದ ಎರಡು ವಾರದಿಂದ ದ.ಕ. ಜಿಲ್ಲೆಯಾದ್ಯಂತ ತಡರಾತ್ರಿವರೆಗೂ ಎಡಬಿಡದೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದರಿಂದ ಬಳಲಿದ್ದ ಸಚಿವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಿದೆ. ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಸಚಿವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು ಯಾವುದೇ ಸಮಸ್ಯೆ ಇಲ್ಲ. ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಬೇಗನೇ ಬಿಡುಗಡೆಯಾಗಲಿದ್ದಾರೆ. ಯಾರೂ ಕೂಡಾ ಆತಂಕಪಡುವ ಅಗತ್ಯವಿಲ್ಲ ಎಂದು ಬಿ.ಎಚ್.ಖಾದರ್ ತಿಳಿಸಿದ್ದಾರೆ.
ಯು.ಟಿ. ಖಾದರ್ ಭೇಟಿ:
ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಅವರು ಸಂಜೆಯ ವೇಳೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಬಿ.ರಮಾನಾಥ ರೈ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ವೈದ್ಯರು 3 ದಿನಗಳ ಕಾಲ ವಿಶ್ರಾಂತಿಯನ್ನು ಸೂಚಿಸಿದ್ದು ನಂತರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.