ಮಾಲಿನ್ಯ ತಪಾಸಣೆ ವಂಚನೆಯ ಸರದಿ ಈಗ ರೆನೊ ಕಂಪೆನಿಯದ್ದು
ಪ್ಯಾರಿಸ್ (ಫ್ರಾನ್ಸ್), ಮಾ. 16: ತನ್ನ ಡೀಸಲ್ ಮತ್ತು ಪೆಟ್ರೋಲ್ ಇಂಜಿನ್‌ಗಳ ಮಾಲಿನ್ಯ ತಪಾಸಣೆಯಲ್ಲಿ ಫ್ರಾನ್ಸ್‌ನ ಕಾರು ತಯಾರಿಕಾ ಸಂಸ್ಥೆ ರೆನೊ 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ವಂಚನೆ ನಡೆಸಿದೆ ಹಾಗೂ ಇದು ಆಡಳಿತದ ಉನ್ನತ ಮಟ್ಟದಲ್ಲಿದ್ದವರಿಗೂ ಗೊತ್ತಿತ್ತು ಎಂದು ತನಿಖಾ ವರದಿಯೊಂದು ತಿಳಿಸಿದೆ.
‘‘ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಲೋಸ್ ಘೋಸನ್ ಸೇರಿದಂತೆ ಇಡೀ ಆಡಳಿತ ವ್ಯವಸ್ಥೆಯು ಈ ಅವ್ಯವಹಾರದಲ್ಲಿ ಶಾಮೀಲಾಗಿತ್ತು’’ ಎಂದು ವರದಿ ಹೇಳಿದೆ.
ಈ ವರದಿಯ ಆಧಾರದಲ್ಲಿ ರೆನೊ ಕಂಪೆನಿಯ ವಿರುದ್ಧ ಫ್ರಾನ್ಸ್ ಪ್ರಾಸಿಕ್ಯೂಟರ್‌ಗಳು ಮೊಕದ್ದಮೆ ದಾಖಲಿಸಿದ್ದಾರೆ.ಆದರೆ, ಈ ಆರೋಪಗಳನ್ನು ರೆನೊ ತಕ್ಷಣ ನಿರಾಕರಿಸಿದೆ.
‘‘ರೆನೊ ಮೋಸ ಮಾಡುವುದಿಲ್ಲ’’ ಎಂದು ಕಂಪೆನಿಯ ಎರಡನೆ ಸ್ಥಾನದಲ್ಲಿರುವ ಅಧಿಕಾರಿ ತಿಯರಿ ಬೊಲೊರ್ ಟೆಲಿಫೋನ್‌ನಲ್ಲಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.
ಕಂಪೆನಿಯ ಮಾಲಿನ್ಯ ನಿಯಂತ್ರಣ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಲೋಸ್ ಬೇರೆಯವರಿಗೆ ವಹಿಸಿರುವುದಕ್ಕೆ ಪುರಾವೆಯಿಲ್ಲ ಎಂದು ಹೇಳಿರುವ ವರದಿ, ಹಾಗಾಗಿ, ಇದಕ್ಕೆ ಅವರೇ ಜವಾಬ್ದಾರಿ ಎಂದಿದೆ.