ಪರಿಷ್ಕೃತ ನಿಷೇಧ ಆದೇಶಕ್ಕೂ ತಡೆಯಾಜ್ಞೆ : ಹವಾಯಿ ಫೆಡರಲ್ ನ್ಯಾಯಾಲಯದ ತೀರ್ಪು; ಮತ್ತೊಮ್ಮೆ ಟ್ರಂಪ್‌ಗೆ ಭಾರೀ ಮುಖಭಂಗ
ಹೊನೊಲುಲು (ಅಮೆರಿಕ), ಮಾ. 16: ಆರು ಮುಸ್ಲಿಮ್ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪರಿಷ್ಕೃತ ಆದೇಶಕ್ಕೆ ಹವಾಯಿ ರಾಜ್ಯದ ಫೆಡರಲ್ ನ್ಯಾಯಾಲಯವೊಂದು ಬುಧವಾರ ತಡೆಯಾಜ್ಞೆ ನೀಡಿದೆ.ಆದೇಶವು ಜಾರಿಗೆ ಬಂದರೆ ‘ಸರಿಪಡಿಸಲಾಗದ ಹಾನಿ’ಯನ್ನು ಉಂಟು ಮಾಡುವ ಸಾಧ್ಯತೆಯನ್ನು ಹವಾಯಿ ರಾಜ್ಯ ಸಾಬೀತುಪಡಿಸಿದೆ ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಡೆರಿಕ್ ವಾಟ್ಸನ್ ತೀರ್ಪು ನೀಡಿದರು.
ಪರಿಷ್ಕೃತ ನಿಷೇಧ ಆದೇಶವನ್ನು ಪ್ರಶ್ನಿಸಿ ಹವಾಯಿ ನ್ಯಾಯಾಲಯದ ಮೆಟ್ಟಿಲೇರಿತ್ತು. ನಿಷೇಧದ ವಿರುದ್ಧ ಮೂರು ಮೊಕದ್ದಮೆಗಳು ದಾಖಲಾಗಿದ್ದು, ಹೊನೊಲುಲು ನ್ಯಾಯಾಲಯದ ತೀರ್ಪು ಮೊದಲನೆಯದಾಗಿದೆ.ಆದೇಶವು ಗುರುವಾರ (ಮಾರ್ಚ್ 16) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.ವಾಶಿಂಗ್ಟನ್ ಮತ್ತು ಮೇರಿಲ್ಯಾಂಡ್ ರಾಜ್ಯಗಳಲ್ಲಿ ಸಲ್ಲಿಕೆಯಾಗಿರುವ ಮೊಕದ್ದಮೆಗಳ ತೀರ್ಪುಗಳೂ ಬುಧವಾರ ರಾತ್ರಿಯ ವೇಳೆಗೆ ಹೊರಬೀಳುವ ನಿರೀಕ್ಷೆಯಿದೆ.
ಈ ತೀರ್ಪು ಪರಿಷ್ಕೃತ ನಿಷೇಧ ಆದೇಶದ ಎರಡನೆ ಪರಿಚ್ಛೇದ ಅಮೆರಿಕದಾದ್ಯಂತ ಜಾರಿಗೆ ಬರುವುದನ್ನು ತಡೆಯುತ್ತದೆ. ಎರಡನೆ ಪರಿಚ್ಛೇದವು ಇರಾನ್, ಲಿಬಿಯ, ಸೊಮಾಲಿಯ, ಸುಡಾನ್, ಸಿರಿಯ ಮತ್ತು ಯಮನ್ ದೇಶಗಳ ನಾಗರಿಕರು 90 ದಿನಗಳ ಕಾಲ ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುತ್ತದೆ.
ನಿರಾಶ್ರಿತರಿಗೆ ಅಮೆರಿಕದಲ್ಲಿ ಆಶ್ರಯ ನೀಡುವ ಕಾರ್ಯಕ್ರಮವನ್ನು 120 ದಿನಗಳ ಕಾಲ ಅಮಾನತಿನಲ್ಲಿಡುವ ಉದ್ದೇಶದ ಆರನೆ ಪರಿಚ್ಛೇದಕ್ಕೂ ತೀರ್ಪು ತಡೆಯಾಜ್ಞೆ ನೀಡಿದೆ.ಈ ಬಗ್ಗೆ ಶ್ವೇತಭವನ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಭಯೋತ್ಪಾದಕರು ಅಮೆರಿಕ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಆದೇಶ ಹೊರಡಿಸಲಾಗಿದೆ ಎಂದು ಅದು ವಾದಿಸಿದೆ.
ಏಳು ಮುಸ್ಲಿಮ್ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಮೂಲ ಆದೇಶವನ್ನು ಟ್ರಂಪ್ ಜನವರಿ 27ರಂದು ಹೊರಡಿಸಿದ್ದರು. ಆ ಆದೇಶವು ಭಾರೀ ಗೊಂದಲಕ್ಕೆ ಕಾರಣವಾಗಿತ್ತು.ಆದರೆ, ಸಿಯಾಟಲ್‌ನ ಫೆಡರಲ್ ನ್ಯಾಯಾಲಯವೊಂದು ಬಳಿಕ ಅದಕ್ಕೆ ತಡೆಯಾಜ್ಞೆ ನೀಡಿತು.ಈ ಹಿನ್ನೆಲೆಯಲ್ಲಿ ಟ್ರಂಪ್, ಇತ್ತೀಚೆಗೆ ಪರಿಷ್ಕೃತ ಆದೇಶವನ್ನು ಹೊರಡಿಸಿದರು. ನೂತನ ಆದೇಶದಲ್ಲಿ, ನಿಷೇಧಿತ ದೇಶಗಳ ಮೂಲ ಪಟ್ಟಿಯಿಂದ ಇರಾಕನ್ನು ಹೊರಗಿಡಲಾಗಿತ್ತು.