×
Ad

ಕರಾವಳಿ ಜನರ ಬೇಡಿಕೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸೂಕ್ತ ಸ್ಪಂದನೆ: ಮೊಯ್ದಿನ್ ಬಾವ

Update: 2017-03-16 21:32 IST

ಮಂಗಳೂರು.ಮಾ,16:ಈ ಬಾರಿಯ ಬಜೆಟ್ ಮಂಡನೆಯ ಸಂದರ್ಭದಲ್ಲಿ ಕರಾವಳಿ ಭಾಗದ ಜನರ ಬಹು ಮುಖ್ಯ ಬೇಡಿಕೆಗಳಿಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 ಕರಾವಳಿಯಲ್ಲಿ ಎತ್ತಿನಹೊಳೆಯ ಯೋಜನೆಯಿಂದ ಆತಂಕಕ್ಕೆ ಒಳಗಾಗಿದ್ದ ಜನರಿಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸಲು ಪಶ್ಚಿಮ ವಾಹಿನಿ ಯೋಜನೆಯ ಮೂಲಕ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು 100 ಕೋಟಿ ರೂ ಅನುದಾನ ನಿಗದಿ ಪಡಿಸಿರುವುದು ಉತ್ತಮ ಕೊಡುಗೆಯಾಗಿದೆ.ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಇನ್ನಷ್ಟು ಹೆಚ್ಚಿಸಲು ರಾಜ್ಯದ ಮುಖ್ಯ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಉಪ್ಪು ನೀರನ್ನು ಸಂಸ್ಕರಿಸುವ ಯೋಜನೆಯನ್ನು ಹಮ್ಮಿಕೊಂಡಿರುವುದು ಜಿಲ್ಲೆಯ ಜನತೆಯ ಬೇಡಿಕೆ ಯಾಗಿದೆ. ಮಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಭೂ ಸ್ವಾಧೀನ ಪಡಿಸಿಕೊಂಡು ನಾಗರಿಕ ವಿಮಾನ ಯಾನ ಸಚಿವಾಲಯಕ್ಕೆ ಹಸ್ತಾಂತರಿಸಲು ತೆಗೆದುಕೊಂಡ ತೀರ್ಮಾನ ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.
ಬ್ಯಾರಿ ಅಧ್ಯಯನ ಪೀಠಕ್ಕೆ ದಿ.ಇದಿನಬ್ಬರ ಹೆಸರು ಸೂಚಿಸಲು ಪ್ರಸ್ತಾವನೆ:-ಈ ಬಾರಿಯ ಬಜೆಟ್‌ನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಲುದ್ದೇಶಿಸಿರುವ ಬ್ಯಾರಿ ಅಧ್ಯಯನ ಪೀಠಕ್ಕೆ ಕವಿ,ಸಾಹಿತಿ,ರಾಜಕಾರಣಿ ದಿವಂಗತ.ಬಿ.ಎಂ.ಇದಿನಬ್ಬರವರ ಹೆಸರನ್ನು ಇಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.

 ಪವಿತ್ರ ಹಜ್ ಯಾತ್ರೆಗೆ ಪೂರಕವಾಗಿ ಮಂಗಳೂರು ವಿಮಾನ ನಿಲ್ದಾಣದ ಬಳಿಯ ಕೆಂಜಾರಿನಲ್ಲಿ ಈ ಹಿಂದೆ 2ಎಕ್ರೆ ಸ್ಥಳವನ್ನು ಗುರುತಿಸಲಾಗಿತ್ತು.ಈ ಬಜೆಟ್‌ನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ನಿಗದಿ ಪಡಿಸಿರುವುದು ಕರಾವಳಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಒದಗಿಸುವುದು,ಮತ್ಸಾಶ್ರಯ ಯೋಜನೆ ,ಮೀನುಗಾರರ ಸಹಕಾರಿ ಸಂಘಗಳಿಗೆ ಸಹಾಯ ನೀಡಲು ತೆಗೆದುಕೊಂಡಿರುವ ಕ್ರಮಗಳು,ವೆನ್‌ಲಾಕ್ ಆಸ್ಪತ್ರೆ ಅಭಿವೃದ್ಧಿಗೆ ಅನುದಾನ ನೀಡಿರುವುದು,ಮೂಡಬಿದ್ರೆ,ಕಡಬ ತಾಲೂಕು ಬೇಡಿಕೆಗೆ ಸ್ಪಂದಿಸಿರುವುದು,ವಿಮಾನ ನಿಲ್ದಾಣ ಸಂಪರ್ಕಿಸುವ ಮಂಗಳೂರು -ಅತ್ರಾಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಅನುದಾನ ನಿಗದಿ ಪಡಿಸಿರುವುದು,ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ದಯ ಸರಕಾರ ಅನುದಾನ ನಿಗದಿಪಡಿಸಿರುವುದು ಕರಾವಳಿಯ ಜನರ ಬೇಡಿಕೆಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಸ್ಪಂದನ ದೊರೆತಿದೆ ಎಂದು ಮೊಯ್ದಿನ್ ಬಾವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಬಶೀರ್ ಅಹಮ್ಮದ್,ಹರಿಶ್,ಕುಮಾರ ಮೆಂಡನ್,ಆನಂದ ಅಮೀನ್,ಮಹಮ್ಮದಾಲಿ,ಯುವ ಕಾಂಗ್ರೆಸ್ ಮುಖಂಡ ವರುಣ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News