ಮಂಗಳೂರು: ವಿಚಾರಣಾಧೀನ ಕೈದಿ ಪರಾರಿ ಪ್ರಕರಣ; ಮೂವರು ಅಧಿಕಾರಿಗಳ ತಲೆದಂಡ
ಮಂಗಳೂರು, ಮಾ. 16: ಮಂಗಳೂರು ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕರನ್ನು ವರ್ಗಾವಣೆ ಮಾಡಿ, ಜೈಲು ವೀಕ್ಷಕರನ್ನು ಅಮಾನತು ಮಾಡಲಾಗಿದೆ.
ಜೈಲು ಅಧೀಕ್ಷಕ ಕೃಷ್ಣಮೂರ್ತಿ ಅವರನ್ನು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಿದರೆ, ಜೈಲು ವೀಕ್ಷಕರಾದ ಬಿ.ರಂಗಪ್ಪ ಹಾಗೂ ಎಸ್.ಕಠಾರಿ ಅವರನ್ನು ಅಮಾನತುಗೊಳಿಸಲಾಗಿದೆ. ಮಂಗಳೂರು ಉಪಕಾರಾಗೃಹದ ನೂತನ ಅಧೀಕ್ಷಕರಾಗಿ ಬೆಂಗಳೂರು ಪರಪ್ಪನ ಅಗ್ರಹಾರದಿಂದ ಸುರೇಶ್ ಎಂಬವರನ್ನು ವರ್ಗಾವಣೆಗೊಳಿಸಿ ಬಂಧೀಖಾನೆ ಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಆದೇಶ ಹೊರಡಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜೈಲ್‌ನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಬೆಳ್ತಂಗಡಿ ಗರ್ಡಾಡಿ ಗ್ರಾಮದ ಬೊಲ್ಕಲ್ಲುಗುಡ್ಡೆ ನಿವಾಸಿ ಜಿನ್ನಪ್ಪ ಪರವ (43) ಮಾ.10 ರಂದು ಬೆಳಗ್ಗಿನ ಜಾವ ಪರಾರಿಯಾಗಿದ್ದ. ಆದರೆ, ಮಾ.14 ರಂದು ಸುಳ್ಯ ತಾಲೂಕಿನ ಕಂದ್ರಪ್ಪಾಡಿಯಲ್ಲಿ ಆತನನ್ನು ಸುಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಕೈದಿ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಂಧೀಖಾನೆ ಇಲಾಖೆ ಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಅವರು ತನಿಖೆ ನಡೆಸಿ ವರದಿ ನೀಡುವಂತೆ ಬೆಳಗಾವಿ ಡಿಐಜಿ ಟಿ.ಶೇಷ ಅವರಿಗೆ ಸೂಚಿಸಿದ್ದರು.
ಮಾ.12 ರಂದು ಮಂಗಳೂರು ಉಪಕಾರಾಗೃಹಕ್ಕೆ ಆಗಮಿಸಿದ ಡಿಐಜಿ ಅವರು, ಅಧೀಕ್ಷಕ, ವೀಕ್ಷಕರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿತ್ತು.
ವರದಿಯ ಪ್ರಕಾರ ಕರ್ತವ್ಯದ ಅವಧಿಯಲ್ಲಿ ಜೈಲು ವೀಕ್ಷಕರು ನಿದ್ದೆ ಮಾಡಿರುವುದು ದೃಢಪಟ್ಟಿದೆ. ಈ ಮೂಲಕ ಕರ್ತವ್ಯ ಲೋಪ ಎಸಗಿ ಕೈದಿ ಪರಾರಿಯಾಗಲು ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.