×
Ad

​ವಚನ ಸಾಹಿತ್ಯವಲ್ಲ; ಅಂತರ್‌ಮುಖಿ ಚಿಂತನೆ:ವೀಣಾ ಬನ್ನಂಜೆ

Update: 2017-03-16 21:51 IST

ತಿಂಗಳೆ (ಹೆಬ್ರಿ), ಮಾ.16: ವಚನಗಳು ಶರಣರು ಆಡಿದ ಮಾತುಗಳೇ ಹೊರತು ಸಾಹಿತ್ಯವಲ್ಲ. ಸಾಹಿತ್ಯಕ್ಕೂ ವಚನಗಳಿಗೂ ಅಂತರವಿದೆ. ಸಾಹಿತ್ಯ ಬುದ್ಧಿಪೂರ್ವಕ ಬರೆದುದು. ವಚನ ಮಾತಾಗಿ ಹೊರಬಂದುದು. ಆದರೆ ಈ ಮಾತು ಸಾಮಾನ್ಯ ಮಾತಿನಂತಲ್ಲ. ಅವು ಅಂತರ್‌ಮುಖಿ ಚಿಂತನೆಯಿಂದ ಪರಿಪೂರ್ಣ ಶರಣಾಗತಿಯಿಂದ ಹೊರಹೊಮ್ಮಿದವುಗಳು. ಹೀಗಾಗಿ ಇವನ್ನು ಶರಣರ ವಚನಗಳೆನ್ನುತ್ತೇವೆ ಎಂದು ಸಾಹಿತಿ ಹಾಗೂ ಚಿಂತಕಿ ವೀಣಾ ಬನ್ನಂಜೆ ಹೇಳಿದ್ದಾರೆ.

ತಿಂಗಳೆ ಗರಡಿ ನೇಮೋತ್ಸವದ ಸಂದರ್ಭದಲ್ಲಿ ನಡೆದ 56ನೇ ತಿಂಗಳೆ ಸಾಹಿತ್ಯೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ, ಅಲ್ಲಮ, ಬಸವಣ್ಣ, ಅಕ್ಕಮಹಾದೇವಿಯವರ ವಚನಗಳಲ್ಲಿ ಆಧ್ಯಾತ್ಮದ ಒಳನೋಟವಿದೆ. ಅವು ಓದುತ್ತಾ ಹೋದಂತೆ ಹೊಸ ಹೊಸ ಅರ್ಥಗಳು ತೆರೆದು ಕೊಳ್ಳುತ್ತವೆ ಎಂದರು.

ವಚನಗಳು ಲಿಂಗ ತಾರತಮ್ಯವನ್ನು, ಜಾತಿ ಮತಗಳನ್ನು, ಸಾಮಾಜಿಕ ಓರೆಕೋರೆಗಳನ್ನು ಎತ್ತಿತೋರಿ ಸಾಮಾಜಿಕ ಸಮಾನತೆಗೆ ನಾಂದಿ ಹಾಡಿದ ದಾರಿದೀಪಗಳೆನಿಸಿವೆ. ಅನೇಕ ವಚನಗಳನ್ನು ನೋಡಿದಾಗ ಅವು ವೇದಮಂತ್ರ ಗಳ ಸಾರವೇ ಆಗಿವೆ. ಹೀಗಾಗಿ ವಚನಗಳನ್ನು ವಚನವೇದವೆಂದೂ ಕರೆಯುತ್ತಾರೆ ಎಂದು ವೀಣಾ ಬನ್ನಂಜೆ ನುಡಿದರು.

ಇದೇ ಸಂದರ್ಭದಲ್ಲಿ ಕಂಪ್ಯೂಟರ್ ತಂತ್ರಾಂಶ ತಜ್ಞ ನಾಡೋಜ ಕೆ.ಪಿ.ರಾವ್ ಅವರಿಗೆ ಈ ಬಾರಿಯ ತಿಂಗಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸದೆ ಶೋಭಾ ಕರಂದ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಕವಿ ಹಾಗೂ ಮಂಗಳೂರು ಆಕಾಶವಾಣಿಯ ಡಾ.ವಸಂತ ಕುಮಾರ್ ಪೆರ್ಲ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ನಂದಳಿಕೆ ಸಿರಿ ಆಲಡೆ ಮುಖ್ಯಸ್ಥ ಸುಹಾಸ್ ಹೆಗ್ಡೆ ಉಪಸ್ಥಿತರಿದ್ದರು.

ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾನದಿ ವಿಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಭುವನ ಪ್ರಸಾದ ಹೆಗ್ಡೆ ಮಣಿಪಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News