ಉಡುಪಿ ಜಿಲ್ಲೆಯಾದ್ಯಂತ ಅಂಚೆ ನೌಕರರ ಮುಷ್ಕರ
ಉಡುಪಿ, ಮಾ.16: ಏಳನೆ ವೇತನ ಆಯೋಗದ ಶಿಫಾರಸ್ಸುಗಳಲ್ಲಿರುವ ನ್ಯೂನತೆಗಳನ್ನು ಪುನರ್‌ಪರಿಶೀಲಿಸುವಂತೆ ಆಗ್ರಹಿಸಿ ಅಂಚೆ ನೌಕರರ ಸಂಘ ಗಳ ಜಂಟಿ ಕ್ರಿಯಾ ಸಮಿತಿ ಉಡುಪಿ ವಿಭಾಗದ ವತಿಯಿಂದ ಇಂದು ಜಿಲ್ಲೆಯ ಅಂಚೆ ಕಚೇರಿಗಳನ್ನು ಮುಚ್ಚಿ ಮುಷ್ಕರ ನಡೆಸಲಾಯಿತು.
ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಹಮ್ಮಿಕೊಳ್ಳಲಾದ ಅಂಚೆ ನೌಕರರ ಧರಣಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಅಂಚೆ ನೌಕರರ ಸಂಘ ಫೋಸ್ಟ್‌ಮೆನ್-ಎಂಟಿಎಸ್ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿಜಯ ನಾಯರಿ, 7ನೆ ವೇತನ ಆಯೋಗದ ವರದಿಯಲ್ಲಿನ ನೂನ್ಯತೆಗಳ ಪುನರ್‌ಪರಿಶೀಲನೆಗಾಗಿ ಕೇಂದ್ರ ಸಂಪುಟ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಬೇಡಿಕೆಗಳನ್ನು ಇತ್ಯರ್ಥಗೊಳಿಸಬೇಕು ಹಾಗೂ ಕನಿಷ್ಠ ವೇತನದಲ್ಲಿ ಹೆಚ್ಚಳ, ಫಿಟ್‌ಮೆಂಟ್ ಸೂತ್ರಗಳನ್ನು ಶೀಘ್ರವೇ ಜಾರಿಗೊಳಿಸಬೇಕು ಎಂದು ಒತ್ತಾಯಿ ಸಿದರು.
ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರಂತೆ ಪರಿಗಣಿಸಿ ವೇತನ ಹಾಗೂ ಎಲ್ಲ ಭತ್ಯೆಗಳನ್ನು ನೀಡಬೇಕು. ಮನೆ ಬಾಡಿಗೆ ಭತ್ಯೆಯನ್ನು ಶೇ.30, ಶೇ.20 ಹಾಗೂ ಶೇ.10ರಷ್ಟು ಉಳಿಸಿಕೊಂಡು ಸಂಚಾರ ಭತ್ಯೆಯನ್ನು ಹೆಚ್ಚಿಸ ಬೇಕು. 7ನೆ ವೇತನ ಆಯೋಗದ ಶಿಫಾರಸ್ಸಿನಿಂದ ಆಗಿರುವ ಎಲ್ಲ ರೀತಿಯ ತಾರತಮ್ಯಗಳನ್ನು ಸಮಯ ಪರಿಮಿತಿಯೊಳಗೆ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.
ಪಿಎಫ್, ಆರ್‌ಡಿಎ ಕಾಯ್ದೆ, ಹೊಸ ಪಿಂಚಣಿ ಪದ್ಧತಿಯನ್ನು ರದ್ದು ಗೊಳಿಸಿ ಎಲ್ಲ ಕೇಂದ್ರ ಸರಕಾರಿ ನೌಕರರಿಗೂ ಒಂದೇ ರೀತಿಯ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನೀಡಬೇಕು. ದಿನಗೂಲಿ, ಗುತ್ತಿಗೆ, ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು. ಸರಕಾರಿ ಕೆಲಸಗಳನ್ನು ಹೊರಗುತ್ತಿಗೆ ಕೊಡು ವುದನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದರು.
ಧರಣಿಯಲ್ಲಿ ಸಂಘದ ಗ್ರೂಪ್ ಸಿ ಅಧ್ಯಕ್ಷ ಎಚ್.ಕೆ.ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕೆ., ಪ್ರಮುಖರಾದ ಗುರುಪ್ರಸಾದ್, ರಾಜೇಶ್ ಎಂ.ಕೆ., ಎನ್.ಎ.ನೇಜಾರ್, ಎಚ್.ಉಮೇಶ್ ನಾಯಕ್, ಗುರುರಾಜ ಆಚಾಯ, ನರಸಿಂಹ ನಾಯಕ್, ವಾಸುದೇವ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.