×
Ad

ಮಾಜಿ ಆರೆಸ್ಸೆಸ್ ಪ್ರಚಾರಕ ತ್ರಿವೇಂದ್ರ ಸಿಂಗ್ ರಾವತ್ ಉತ್ತರಾಖಂಡದ ನೂತನ ಸಿಎಂ

Update: 2017-03-17 09:11 IST

ಡೆಹ್ರಾಡೂನ್, ಮಾ.17: ಆರೆಸ್ಸೆಸ್‌ನ ಮಾಜಿ ಪ್ರಚಾರಕ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ. ಬುಧವಾರ ರಾತ್ರಿ ಈ ಬಗ್ಗೆ ರಾವತ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಶುಕ್ರವಾರ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗುವುದು.

ಹೊಸದಾಗಿ ಚುನಾಯಿತರಾದ ಬಿಜೆಪಿ ಸದಸ್ಯರು ಶುಕ್ರವಾರ ಸಭೆ ಸೇರಲಿದ್ದಾರೆ. ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ ಸಚಿವ ನರೇಂದ್ರಸಿಂಗ್ ತೋಮರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ, ರಾಜ್ಯದ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿದ್ದ ಧರ್ಮೇಂದ್ರ ಪ್ರಧಾನ್ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುಖಂಡ ಶ್ಯಾಮ್ ಜಾಜು ಸಭೆಯಲ್ಲಿ ಭಾಗವಹಿಸುವರು.

 ಪ್ರಮಾಣ ವಚನ ಸ್ವೀಕಾರ ಸಮಾರಂಭ ಡೆಹ್ರಾಡೂನ್‌ನಲ್ಲಿ ಶನಿವಾರ (ಮಾ.18) ಅಪರಾಹ್ನ 3ಕ್ಕೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಭಟ್ ಹೇಳಿದ್ದಾರೆ. ಎಲ್ಲ ಶಾಸಕರೂ ಶುಕ್ರವಾರ ರಾಜಧಾನಿಗೆ ಆಗಮಿಸಲಿದ್ದಾರೆ ಎಂದು ಭಟ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News