ತಂದೆಯ ಎದುರೇ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ
ಅಹ್ಮದಾಬಾದ್, ಮಾ.17: ಚಲಿಸುವ ವಾಹನದಲ್ಲಿ ತಂದೆಯ ಎದುರೇ ಹದಿಹರೆಯದ ಇಬ್ಬರು ಹೆಣ್ಣುಮಕ್ಕಳ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಗುಜರಾತ್ ನ ದಾಹೋದ್ ಜಿಲ್ಲೆ ಬರಿಯಾ ತಾಲೂಕು ದೇವಗಂಧ್ ಎಂಬಲ್ಲಿ ನಡೆದಿದೆ.
ಬಾಲಕಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ 13 ಆರೋಪಿಗಳ ಪೈಕಿ ಐದು ಮಂದಿಯನ್ನು ಬಂಧಿಸಲಾಗಿದೆ. ಕುಮತ್ ಬರಿಯಾ, ಗೋಪ್ಸಿನ್ ಬರಿಯಾ ಹಾಗೂ ಇತರರು 13 ಹಾಗೂ 15 ವರ್ಷದ ಸಹೋದರಿಯರನ್ನು ಮತ್ತು ಅವರ ತಂದೆಯನ್ನು ಭೂತ್‌ಪಾಗ್ಲಾ ಗ್ರಾಮದಿಂದ ಗುರುವಾರ ಅಪಹರಿಸಿದ್ದರು. ವಾಹನವೊಂದರಲ್ಲಿ ಅವರನ್ನು ಬಲಾತ್ಕಾರದಿಂದ ಕೂರಿಸಿಕೊಂಡು ಹೋಗಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆಪಾದಿಸಲಾಗಿದೆ.
ನಾಲ್ಕು ಮಂದಿ ಎರಡು ಮೋಟರ್ ಸೈಕಲ್‌ಗಳಲ್ಲಿ ಈ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಸಂತ್ರಸ್ತ ಮಕ್ಕಳ ತಂದೆ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. ಪಾನ ನಿಷೇಧ ಕಾನೂನಿನಡಿ ಬಂಧಿತರಾಗಿದ್ದ ಸಂತ್ರಸ್ತೆಯರ ಸಹೋದರ, ವಿಚಾರಣೆ ವೇಳೆ ಕುಮತ್ ಅವರಿಂದ ಮದ್ಯ ಪಡೆಯುತ್ತಿದ್ದುದಾಗಿ ಬಹಿರಂಗಪಡಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಅತ್ಯಾಚಾರ ಎಸಗುತ್ತಿದ್ದೇವೆ ಎಂದು ಆರೋಪಿ ಕುಮತ್, ಘಟನೆಗೂ ಮುನ್ನ ತಿಳಿಸಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ. ಪಾನನಿಷೇಧ ಕಾಯ್ದೆಯಡಿ ಕುಮತ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯರನ್ನು ಮತ್ತು ತಂದೆಯನ್ನು ಮಂದವ್ ಎಂಬ ಗ್ರಾಮದ ಬಳಿ ಇಳಿಸಿದ ದುಷ್ಕರ್ಮಿಗಳು ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆ ನೀಡಿ ಹೋಗಿದ್ದಾರೆ. ಬಾಲಕಿಯರನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.