ಮುಖ್ಯಮಂತ್ರಿ ಹುದ್ದೆಗೇರಿದ ಪ್ರಪ್ರಥಮ ಬಿ ಎಸ್ ಎಫ್ ಯೋಧ ಬಿರೇನ್ ಸಿಂಗ್
ಇಂಫಾಲ್,ಮಾ.17 : ಮಣಿಪುರದ ಹೊಸ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ಫುಟ್ಬಾಲ್ ಎಂದರೆ ಪಂಚಪ್ರಾಣ. ಮುಖ್ಯಮಂತ್ರಿ ಹುದ್ದೆಗೇರಿದ ಪ್ರಪ್ರಥಮ ಬಿ ಎಸ್ ಎಫ್ ಯೋಧ ಅವರಾಗಿದ್ದಾರೆ. ಅವರ ಫುಟ್ಬಾಲ್ ಪ್ರೀತಿಯೇ ಹಲವು ವರ್ಷಗಳ ಹಿಂದೆ ಅವರನ್ನು ಬಿ ಎಸ್ ಎಫ್ ಸೇರುವಂತೆ ಮಾಡಿತ್ತು. ಗಡಿ ಭದ್ರತಾ ಪಡೆಯ ಸೇವೆಯಿಂದ ರಾಜೀನಾಮೆ ನೀಡಿದ ನಂತರ ಅವರು ಆಯ್ಕೆ ಮಾಡಿದ್ದು ಪತ್ರಿಕೋದ್ಯಮವನ್ನು. ಅಂತಿಮವಾಗಿ ಈಗ ರಾಜಕೀಯ ಅವರ ವೃತ್ತಿಯಾಗಿದೆ.
ಇಂಫಾಲ್ ದಿಂದ 15 ಕಿಮೀ ದೂರದಲ್ಲಿರುವ ಹೀಂಗಾಂಗ್ ನಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಸಿಂಗ್ ಒಬ್ಬ ಪ್ರತಿಭಾವಂತ ಫುಟ್ಬಾಲ್ ಆಟಗಾರಾಗಿ ಎಲ್ಲರ ಗಮನ ಸೆಳೆದಿದ್ದರು.
ಇದರಿಂದಾಗಿಯೇ ಅವರಿಗೆ ಬಿ ಎಸ್ ಎಫ್ ಸೇರುವ ಅವಕಾಶ ಲಭ್ಯವಾಗಿತ್ತು.
ಮುಂದೆ ಬಿ ಎಸ್ ಎಫ್ ತ್ಯಜಿಸಿ ಅವರು ಸ್ಥಳೀಯ ಭಾಷಾ ಪತ್ರಿಕೆ ನಹರೊಲ್ ಗಿ ತೌಡಂಗ್ ಆರಂಭಿಸಿದ್ದರು. ಪತ್ರಿಕೋದ್ಯಮದಲ್ಲಿ ಯಾವುದೇ ಅನುಭವವಿಲ್ಲದೇ ಇದ್ದರೂ ಅವರ ಈ ಪ್ರಯತ್ನ ಯಶಸ್ಸು ಕಂಡಿತ್ತು.
ಎಪ್ರಿಲ್ 2000ರಲ್ಲಿ ಅವರ ಮುದ್ರಣಾಲಯದ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ್ದರು. ಅವರ ಪತ್ರಿಕೆಯಲ್ಲಿ ಉಗ್ರರಿಗೆ ಬೆಂಬಲವಾಗಿ ಸುದ್ದಿಗಳು ಬರುತ್ತಿವೆಯೆಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು.
ಈ ಘಟನೆ ಅವರ ಮನಸ್ಸು ಬದಲಾಯಿಸುವಂತೆ ಮಾಡಿತ್ತು. ಅವರು ತಾವು ಅತಿಯಾಗಿ ಪ್ರೀತಿಸುತ್ತಿದ್ದ ಪತ್ರಿಕೋದ್ಯಮ ವೃತ್ತಿಯನ್ನು ತ್ಯಜಿಸಿ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ವಿಚಾರವನ್ನು ಬುಧವಾರ ಮುಖ್ಯಮಂತ್ರಿಯಾಗಿ ಅಧಿಕಾರಗ್ರಹಣ ಮಾಡಿದ ಸಂದರ್ಭದಲ್ಲೂ ಬಿರೇನ್ ಸಿಂಗ್ ನೆನಪಿಸಿಕೊಂಡಿದ್ದರು.
2002ರಲ್ಲಿ ವಿಧಾನಸಭಾ ಚುನಾವಣೆಯನ್ನು ಡೆಮಾಕ್ರೆಟಿಕ್ ರಿವೊಲ್ಯುಷನರಿ ಪೀಪಲ್ಸ್ ಪಾರ್ಟಿ ಟಿಕೆಟ್ಟಿನಿಂದ ಸ್ಪರ್ಧಿಸಿದ್ದ ಅವರು ಸುಲಭದಲ್ಲಿ ಜಯ ಸಾಧಿಸಿದ್ದರು. ಮೇ 2003ರಲ್ಲಿ ಕಾಂಗ್ರೆಸ್ ಸೇರಿದ ಅವರು ಸಚಿವರೂ ಆದರು. ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಿದ ಅವರು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದರು.
ವಿವಿಧ ಪ್ರಮುಖ ಖಾತೆಗಳನ್ನು ಹೊಂದಿದ್ದ ಅವರು ಮಣಿಪುರ ಸರಕಾರದ ವಕ್ತಾರರಾಗಿಯೂ ಕೆಲಸ ಮಾಡಿದ್ದರಲ್ಲದೆ ಹಿಂದಿನ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರ ಸಮೀಪವರ್ತಿಯಾಗಿದ್ದರು.
ಆದರೆ ಬಹಳ ಬೇಗನೆ ಇಬೊಬಿ ಸಿಂಗ್ ವಿರುದ್ಧ ತಿರುಗಿ ಬಿದ್ದ ಅವರನ್ನು ಸಿಂಗ್ ಕಳೆದ ವರ್ಷ ಪಕ್ಷದಿಂದ ಹೊರ ಹಾಕಿದ್ದರು. ನಂತರ ತನ್ನ ಶಾಸಕ ಸ್ಥಾನವನ್ನೂ ತ್ಯಜಿಸಿದ ಬಿರೇನ್ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿದ್ದರು.
56 ವರ್ಷದ ಬಿರೇನ್ ಸಿಂಗ್ ಅವರು ಸ್ನೇಹಮಯಿ ವ್ಯಕ್ತಿತ್ವದವರಾಗಿದ್ದು ತಾವು ಮುಖ್ಯಮಂತ್ರಿ ಹುದ್ದೆಯೇರುತ್ತೇನೆಂಬುದನ್ನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ ಎಂದು ಹೇಳುತ್ತಾರೆ.