×
Ad

ಮ್ಯಾನ್ಮಾರ್: ರೊಹಿಂಗ್ಯ ಮಕ್ಕಳನ್ನೂ ಬಂಧಿಸುತ್ತಿರುವ ಪೊಲೀಸರು

Update: 2017-03-17 19:04 IST

ಸಿಟ್ವೆ (ಮ್ಯಾನ್ಮಾರ್), ಮಾ. 17: ಮ್ಯಾನ್ಮಾರ್‌ನಲ್ಲಿ ಬಂಡುಕೋರರೊಂದಿಗೆ ಸಂಪರ್ಕ ಹೊಂದಿದ ಆರೋಪದಲ್ಲಿ ನೂರಾರು ರೊಹಿಂಗ್ಯ ಮುಸ್ಲಿಮರನ್ನು ಬಂಧಿಸಲಾಗಿದೆ ಹಾಗೂ ಈ ಪೈಕಿ 10 ವರ್ಷ ಪ್ರಾಯದ ಮಕ್ಕಳೂ ಇದ್ದಾರೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಪೊಲೀಸ್ ದಾಖಲೆಯೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಬಾಂಗ್ಲಾದೇಶ ಗಡಿಗೆ ಸಮೀಪವಿರುವ ಮ್ಯಾನ್ಮಾರ್‌ನ ರಾಜ್ಯ ರಾಖೈನ್‌ನಲ್ಲಿರುವ ಮೂರು ಗಡಿ ಠಾಣೆಗಳ ಮೇಲೆ ಅಕ್ಟೋಬರ್ 9ರಂದು ಬಂಡುಕೋರರು ದಾಳಿ ನಡೆಸಿದ್ದರು. ಆ ಬಳಿಕ 400ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಹಾಗೂ ಆ ಪೈಕಿ 13 ಮಂದಿ ಮಕ್ಕಳಾಗಿದ್ದಾರೆ ಎನ್ನುವುದನ್ನು ಮಾರ್ಚ್ 7ರ ಪೊಲೀಸ್ ದಾಖಲೆಯೊಂದು ತೋರಿಸಿದೆ.

ಬಂಡುಕೋರರೊಂದಿಗೆ ಕೆಲಸ ಮಾಡುತ್ತಿರುವುದನ್ನು ಕೆಲವು ಮಕ್ಕಳು ಒಪ್ಪಿಕೊಂಡಿದ್ದಾರೆ ಹಾಗೂ ಮಕ್ಕಳನ್ನು ವಯಸ್ಕ ಶಂಕಿತರಿಂದ ಪ್ರತ್ಯೇಕವಾಗಿಯೇ ಇಡಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ಬಂಧಿಸಿರುವುದನ್ನು ಸರಕಾರಿ ವಕ್ತಾರರೊಬ್ಬರು ದೃಢಪಡಿಸಿದ್ದಾರೆ. ಆದರೆ, ಅಧಿಕಾರಿಗಳು ಕಾನೂನು ಪಾಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹತ್ಯೆಗಳು, ಸಾಮೂಹಿಕ ಅತ್ಯಾಚಾರಗಳು ಮತ್ತು ಸಾಮೂಹಿಕ ಬಂಧನಗಳು ಸೇರಿದಂತೆ ದೇಶವಿಲ್ಲದ ರೊಹಿಂಗ್ಯ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ, ಸುಮಾರು ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ನಾಯಕಿ ಆಂಗ್ ಸಾನ್ ಸೂ ಕಿ ಅವರ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದೆ.

ಸುಮಾರು 11 ಲಕ್ಷ ರೊಹಿಂಗ್ಯ ಮುಸ್ಲಿಮರ ಮುಕ್ತ ಸಂಚಾರವನ್ನು ನಿರ್ಬಂಧಿಸಲಾಗಿದೆ ಹಾಗೂ ಮ್ಯಾನ್ಮಾರ್‌ನಲ್ಲಿ ಅವರಿಗೆ ಪ್ರಾಥಮಿಕ ಸೇವೆಗಳನ್ನು ನಿರಾಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News