×
Ad

ಟ್ರಂಪ್ ಬಜೆಟ್‌ನಲ್ಲಿ ನಾಸಾ ಅನುದಾನ ಕಡಿತ

Update: 2017-03-17 19:39 IST

ವಾಶಿಂಗ್ಟನ್, ಮಾ. 17: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿರುವ 2018ರ ಬಜೆಟ್, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಅನುದಾನವನ್ನು 19.3 ಬಿಲಿಯ ಡಾಲರ್ (1,26,300 ಕೋಟಿ ರೂಪಾಯಿ)ನಿಂದ 19.1 ಬಿಲಿಯ ಡಾಲರ್ (1,24,990 ಕೋಟಿ ರೂಪಾಯಿ)ಗೆ ತಗ್ಗಿಸುವ ಉದ್ದೇಶವನ್ನು ಹೊಂದಿದೆ.

ಇದರ ಪರಿಣಾಮವಾಗಿ, ಗುರು ಗ್ರಹದ ಶೀತಲ ಉಪಗ್ರಹ ಯುರೋಪಾಕ್ಕೆ ಗಗನ ನೌಕೆ ಕಳುಹಿಸುವ ಯೋಜನೆ ಮತ್ತು ನಾಸಾ ಭೂ ವಿಜ್ಞಾನ ಯೋಜನೆಗಳು ಸೇರಿದಂತೆ ಈಗ ಚಾಲ್ತಿಯಲ್ಲಿರುವ ಕೆಲವು ನಾಸಾ ಯೋಜನೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಪ್ರಸ್ತುತ ಬಜೆಟ್ ಸಾರ್ವಜನಿಕ-ಖಾಸಗಿ ಭಾಗೀದಾರಿಕೆ ಮತ್ತು ಭೂ ಕೇಂದ್ರಿತ ಸಂಶೋಧನೆಗಿಂತಲೂ ಆಳ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚು ಒತ್ತು ನೀಡಿದೆ.

ಅಂತಾರಾಷ್ಟ್ರೀಯ ಸಮುದಾಯಕ್ಕೆ ಚಿಂತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಅನುದಾನ ಕಡಿತದಿಂದ ವಿದೇಶಾಂಗ ಇಲಾಖೆ ಒತ್ತಡಕ್ಕೊಳಗಾಗಿದೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಚಿಂತೆಗೊಳಗಾಗಿದೆ.

ಆದಾಗ್ಯೂ, ಗುರುವಾರ ಸಂತೋಷದ ಮುಖವಾಡವನ್ನು ಧರಿಸಿದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್, ಕಡಿಮೆಯಲ್ಲಿ ಹೆಚ್ಚಿನದನ್ನು ಮಾಡಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಟ್ರಂಪ್ ಮಂಡಿಸಿರುವ ಬಜೆಟ್ ಅವರ ಪ್ರತ್ಯೇಕತಾವಾದಿ ಆವೇಶದ ಮಾತುಗಳು ಮತ್ತು ‘ಅಮೆರಿಕ ಮೊದಲು’ ಘೋಷಣೆಗಳನ್ನು ಪ್ರತಿಫಲಿಸಿದೆ.

ಅಮೆರಿಕದ ರಾಜತಾಂತ್ರಿಕತೆ ನಿಧಿಗೆ ಕನಿಷ್ಠ 28 ಶೇಕಡ ಕಡಿತ ಮಾಡುವ ಪ್ರಸ್ತಾಪವನ್ನು ಅದು ಹೊಂದಿದೆ.ಆದರೆ, ಇದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News