×
Ad

ಮಂಗಳೂರು: ಅಕ್ಷರದಾಸೋಹ ನೌಕರರ ವೇತನ ಏರಿಸಲು ಆಗ್ರಹ

Update: 2017-03-17 19:46 IST

ಮಂಗಳೂರು, ಮಾ. 17: ಕರ್ನಾಟಕ ರಾಜ್ಯದ ಬಜೆಟ್‌ನಲ್ಲಿ ಅಕ್ಷರದಾಸೋಹ ನೌಕರರ ವೇತನ ಏರಿಸದಿರುವ ಸರಕಾರದ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಶುಕ್ರವಾರ ದ.ಕ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಎದುರು ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಬಡ ಬಿಸಿಯೂಟ ಕಾರ್ಮಿಕರನ್ನು ಬೆಳಗ್ಗೆಯಿಂದ ಸಂಜೆವರೆಗೆ ಶಾಲೆಗಳಲ್ಲಿ ದುಡಿಸಿ ಅವರಿಗೆ ಜುಜುಬಿ ವೇತನ ನೀಡುವುದು ಗುಲಾಮಗಿರಿಗೆ ಸಮಾನವಾಗಿದೆ. ಕೇಂದ್ರದ ಬಿಜೆಪಿ ಸರಕಾರ ಏರಿಕೆ ಮಾಡಲು ಉಪ್ಪಿರುವ ರೂ. 1000ವನ್ನು ನೀಡಲಿಲ್ಲ. ಮಾತ್ರವಲ್ಲದೆ ಯುಪಿಎ ಸರಕಾರ ನೀಡುತ್ತಿದ್ದ 3 ಕೋಟಿಗೂ ಮಿಕ್ಕಿದ ಅನುದಾನವನ್ನು ಕೂಡಾ ರದ್ದುಗೊಳಿಸಿದೆ. ಆದರೆ ಬಿಸಿಯೂಟ ನೌಕರರು ಕಾಂಗ್ರೆಸ್ ಸರಕಾರ ವೇತನ ಏರಿಕೆ ಮಾಡಬಹುದೆಂಬ ಆಶಾ ಭಾವನೆ ಹೊಂದಿದ್ದರು. ಆದರೆ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ವರ್ಗಕ್ಕೆ ತೀವ್ರ ನಿರಾಶೆ ಮಾಡಿದ್ದಾರೆ ಎಂದು ಆರೋಪಿಸಿದರು.

 ಜನಪರ ಸರಕಾರವಾದರೆ ಬಡಜನರ ಕೊಂಡು ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಬೇಕು. ಬೆಲೆ ಏರಿಕೆ ವಿಪರೀತವಾಗಿ ಬದುಕು ಸಾಗಿಸುವುದೇ ಕಷ್ಟವಾದ ಸಂದರ್ಭದಲ್ಲಿ ರಾಜ್ಯ ಸರಕಾರ ಸಾಂತ್ವನ ಹೇಳಬೇಕಾಗಿದೆ. 2017-18ರ ಬಜೆಟ್‌ನಲ್ಲಿಯೇ ಕನಿಷ್ಠ ರೂ. 3,000 ವೇತನ ಏರಿಕೆಗೆ ಮುಂದಾಗಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

 ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಸ್ಕೀಮ್ ಕಾರ್ಮಿಕರಲ್ಲೇ ದೊಡ್ಡ ಭಾಗವಾಗಿರುವ ಅಕ್ಷರ ದಾಸೋಹ ಕಾರ್ಮಿಕರ ಸಂಕಷ್ಟಕ್ಕೆ ಪರಿಹಾರ ನೀಡಬೇಕಾದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬಿಸಿಯೂಟ ಕಾರ್ಮಿಕರ ಸಂಕಷ್ಟವನ್ನು ಜಾಸ್ತಿ ಮಾಡಿದೆ. ಜುಜುಬಿ 2,000 ರೂ. ವೇತನದಲ್ಲಿ ಕಾರ್ಮಿಕರು ಹೇಗೆ ಜೀವನ ನಡೆಸಬೇಕು? ಎಂದವರು ಪ್ರಶ್ನಿಸಿದರು. ಈಗಾಗಲೇ ಹೆಚ್ಚು ಸಮಯವನ್ನೇ ಶಾಲೆಯಲ್ಲಿ ಕಳೆಯುತ್ತಿರುವ ಬಿಸಿಯೂಟ ಕಾರ್ಮಿಕರಿಗೆ ವೇತನವನ್ನು ಪ್ರಸ್ತುತ ಬಜೆಟ್ ಅಧಿವೇಶನದಲ್ಲಿಯೇ ಏರಿಕೆಯಾಗಿ ನೀಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಬಿಸಿಯೂಟ ನೌಕರರ ಸಂಘದ ಮುಂದಾಳುಗಳಾದ ಗಿರಿಜಾ, ಭವ್ಯಾ, ರೇಖಾಲತಾ, ಹೇಮಲತಾ, ಶಬಾನ, ಶಾಲಿನಿ, ಭಾರತಿ, ಸಿಐಟಿಯು ಮುಂದಾಳುಗಳಾದ ಯೋಗೀಶ್, ಸದಾಶಿವದಾಸ್ ಮುಂತಾದವರು ಉಪಸ್ಥಿತರಿದ್ದರು.

ಪುರಭವನದ ಬಳಿಯಿಂದ ಬಿಸಿಯೂಟ ನೌಕರರ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿತನಕ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರಾರಂಭದಲ್ಲಿ ಗಿರಿಜಾರವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News