×
Ad

ಕಾಸರಗೋಡು: ಸಾವಿರಾರು ಕುಟುಂಬಗಳನ್ನು ಅತಂತ್ರಗೊಳಿಸುತ್ತಿರುವ ಗಣಿಗಾರಿಕೆ

Update: 2017-03-17 20:31 IST

ಕಾಸರಗೋಡು, ಮಾ.17: ವೆಸ್ಟ್ ಎಳೇರಿಯ ಚಿರಕ್ಕಲ್ ನಲ್ಲಿ ನಡೆಯುತ್ತಿರುವ ಗಣಿಗಾರಿಗೆ ಈ ಪ್ರದೇಶದ ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಅತಂತ್ರಗೊಳಿಸಿದೆ.  ಕಳೆದ ಹದಿಮೂರು ವರ್ಷಗಳಿಂದ ನಡೆಯುತ್ತಿರುವ ಗಣಿಗಾರಿಕೆ ಇದೀಗ ನಾಗರಿಕ ನಿದ್ದೆಗೆಡಿಸಿದೆ. ಗಣಿ ಮಾಫಿಯಾದಿಂದಾಗಿ ಸ್ಥಳೀಯರು ನೆಮ್ಮದಿ ಕಳೆದುಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕೋಝಿಕ್ಕೋಡು ಮೂಲದ ಗಣಿ ಉದ್ಯಮ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ಪ್ರಬಲ ಸ್ಫೋಟ ಹಾಗೂ ಪರಿಸರವಿಡೀ  ಕಗ್ಗಲ್ಲು ಹುಡಿಯಿಂದ ಧೂಳುಮಯವಾಗುತ್ತಿದೆ. ಸ್ಪೋಟದ ತೀವ್ರತೆಗೆ ಹಲವು ಮನೆಗಳ ಗೋಡೆಗಳು ಬಿರುಕುಬಿಟ್ಟಿದ್ದು, ಜನತೆ  ಭಯದ ವಾತಾವರಣದಿಂದ ಬದುಕುವಂತಾಗಿದೆ.

ಇದಲ್ಲದೆ, ಸಮೀಪದಲ್ಲಿ ಹೊಳೆ ಹರಿದು ಹೋಗುತ್ತಿದ್ದು, ಈ ಹೊಳೆಯಿಂದ 10 ಎಚ್ ಪಿ ಯ ಎರಡು ಮೋಟಾರು ಪಂಪ್ ಗಳನ್ನು ಅಳವಡಿಸಿ ನಿರಂತರ ನೀರನ್ನು  ಈ ಕ್ವಾರಿಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ದಿನಂಪ್ರತಿ  ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಕುಡಿಯಲು ನೀರಿನ ಅಭಾವ ಕಂಡು ಬರುತ್ತಿರುವ ಈ ಸಂದರ್ಭದಲ್ಲಿ ನೀರು ದುರ್ಬಳಕೆಯಾಗುತ್ತಿದ್ದು  ಪರಿಸರವನ್ನೇ ನಾಶಪಡಿಸುತ್ತಿದೆ ಎಂದು  ಸ್ಥಳೀಯ ಜನಪರ ಪರಿಸರ ಸಂರಕ್ಷಣಾ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದಲ್ಲಿ ಬೆದರಿಕೆಯೊಡ್ಡಲಾಗುತ್ತಿದ್ದು, ಗಣಿ ಮಾಫಿಯಾಕ್ಕೆ  ಕೆಲ ರಾಜಕಾರಣಿಗಳು , ಜನಪ್ರತಿನಿಧಿಗಳು , ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಪದಾಧಿಕಾರಿಗಳು  ದೂರಿದ್ದಾರೆ 

ಕೇವಲ ಎರಡು ಎಕರೆ  ಸ್ಥಳದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದಿದ್ದರೂ ಇದೀಗ ಇಡೀ ಪ್ರದೇಶವನ್ನೇ ಗಣಿ ಮಾಫಿಯಾ ನುಂಗಿದ್ದು , ಅಧಿಕಾರಿಗಳು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ 

ಈ ಗಣಿ ಮಾಫಿಯಾ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ರೂಪು ನೀಡಲಾಗುವುದು , ಮಾರ್ಚ್ 19 ರಂದು ನಡೆಯುವ ಸಭೆಯಲ್ಲಿ ಈ ಕುರಿತ ನಿರ್ದಾರ ತೆಗೆದುಕೊಳ್ಳಲಾಗುವುದು ಎಂದು ಸಮಿತಿ ಅಧ್ಯಕ್ಷ ಪಿ .  ಸುರೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News