ತಂತ್ರಜ್ಞಾನದಿಂದ ರಂಗಭೂಮಿ ಪ್ರಯೋಗಗಳಿಗೆ ಪ್ರಖರತೆ: ಡಾ. ಡಿ.ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ, ಮಾ.17: ಆಧುನಿಕ ತಂತ್ರಜ್ಞಾನದ ವಿವಿಧ ಆವಿಷ್ಕಾರಗಳ ನೆರವಿನೊಂದಿಗೆ ರಂಗಭೂಮಿಯ ಪ್ರಯೋಗಗಳು ಮತ್ತಷ್ಟು ಪ್ರಖರಗೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಉಜಿರೆಯ ಸಮೂಹಸಾಂಸ್ಕೃತಿಕ ಸಂಘವು ರಜತ ವರ್ಷಾಚಾರಣೆ ಪ್ರಯುಕ್ತ ಎಸ್‌ಡಿಎಂ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ 'ಏನ್ ಹುಚ್ಚುರೀ' ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳೆಯ ಕಲೆ, ಸಂಸ್ಕೃತಿಯನ್ನು ತಂತ್ರಜ್ಞಾನದ ಸ್ಪರ್ಶದೊಂದಿಗೆ ಹೊಸತಾಗಿಸಬಹುದು. ಹೊಸ ಪೀಳಿಗೆ ಹಳೆಯದರ ಕಡೆಗೆ ಬೆನ್ನು ತಿರುಗಿಸುವುದು ಸಹಜ. ಆದರೆ, ಅವರನ್ನೂ ಆಕರ್ಷಿಸುವ ಹಾಗೆ ತಾಂತ್ರಿಕತೆಯನ್ನು ಬಳಸಿಕೊಂಡು ರಂಗಭೂಮಿ ಚಟುವಟಿಕೆಗಳನ್ನು ವಿಸ್ತರಿಸುವ ಪ್ರಯತ್ನಗಳಾಗಬೇಕು. ಹಾಗಾದಾಗ ಮಾತ್ರ ರಂಗಭೂಮಿ ವಿವಿಧ ಕಾಲಗಳಲ್ಲಿ ಹೊಸ ರೂಪ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಕಲಾವಿದರು ಕಲೆಯ ಮೂಲತತ್ವದೂಂದಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬದಲಾವಣೆಗೆ ತಕ್ಕಂತೆ ಕಲಾಪ್ರಯೋಗಗಳಲ್ಲಿ ತೊಡಗಿಕೊಳ್ಳಬೇಕು. ಇಂಥ ಪ್ರಯೋಗಗಳಿಗೆ ವೇದಿಕೆ ಕಲ್ಪಿಸಿಕೊಡಲು ಶೀಘ್ರವೇ ರಂಗಮಂದಿರವನ್ನು ನಿರ್ಮಿಸಲಾಗುವುದು. ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಐದು ವರ್ಷಗಳ ಹಿಂದೆ ರಂಗಮಂದಿರದ ಯೋಜನೆ ರೂಪಿಸಿದ್ದರು. ಆ ಯೋಜನೆಗನುಗುಣವಾಗಿ ಶೀಘ್ರದಲ್ಲಿಯೇ ರಂಗಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದರು.
ಸಮೂಹಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಹೇಮಾವತಿ ವಿ ಹೆಗ್ಗಡೆ ಮಾತನಾಡಿ ಸಾಂಸ್ಕೃತಿಕ ವಾತಾವರಣ ಜೀವಂತವಾಗಿಡುವಲ್ಲಿ ಪ್ರದರ್ಶನ ಕಲೆಗಳ ಪಾತ್ರ ಹಿರಿದು ಎಂದರು. ಬಾಲ್ಯದಿಂದಲ್ಲೇ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಕಲೆಯಡೆಗಿನ ಆಸಕ್ತಿಯನ್ನು ಗಟ್ಟಿಗೊಳಿಸಬೇಕು. ರಾಜ್ಯದಲ್ಲಿ ಅನೇಕರು ಕಲೆ, ನಾಟಕ ಸಂಸ್ಕೃತಿಗಳ ಸಲುವಾಗಿ ಬದುಕನ್ನೇ ಮುಡಿಪಾಗಿಟ್ಟು ಶ್ರಮಿಸಿದ್ದಾರೆ. ಮನಸ್ಸಿಗೆ ಆಹ್ಲಾದ ನೀಡುವಂತಹ ಕಲಾಪ್ರಯೋಗಗಳ ಕಡೆಗೂ ಗಮನ ನೀಡಬೇಕು ಎಂದು ನುಡಿದರು.
ಕಲಾವಿದರು ಕೇವಲ ಹಣಕ್ಕಾಗಿ ದುಡಿಯದೇ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸುತ್ತಾರೆ. ಈಗಿನ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದವರಲ್ಲಿ ಹಲವಾರು ಜನ ರಂಗಭೂಮಿಯಿಂದಲೇ ಬಂದವರು. ಹಾಗಾಗಿ ನಟನೆಗೆ ನಾಟಕಗಳೇ ಬುನಾದಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಕೆ.ಎಸ್.ಪ್ರಭಾಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಜನಾರ್ಧನ ಸ್ವಾಮಿ ದೇವಳದ ಅನುವಂಶಿಕ ಆಡಳಿತ ಮೊಕೇಸ್ತರಾದ ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದರು. ಪ್ರೊ. ಶ್ರೀಧರ್ ಭಟ್ ನಿರೂಪಿಸಿದರು. ಪ್ರೊ. ಕುಮಾರ್ ಹೆಗಡೆ ವಂದಿಸಿದರು.